ಬೆಂಗಳೂರು: ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಇದ್ದಾಗಲೇ ಒಂದು ಕೊಲೆ ನಡೆಯುತ್ತದೆ ಎಂದರೆ ಅರ್ಥ ಏನು? ಬೊಮ್ಮಾಯಿ ಅವರೇ, ಜನ ಸಾಮಾನ್ಯರನ್ನು ರಕ್ಷಣೆ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರಡಿ ಎಂದು ಕಾಂಗ್ರೆಸ್ ಮುಖಂಡ ಎಚ್. ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಸಂಜೆ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹತ್ಯೆಗೈಯ್ಯಲ್ಪಟ್ಟ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿದ್ದರು. ಏರ್ ಪೋರ್ಟ್ ಗೆ ಸಾಗುವ ದಾರಿಯುದ್ದಕ್ಕೂ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಮಧ್ಯೆ ಮುಖ್ಯಮಂತ್ರಿಯವರು ಜಿಲ್ಲೆಯಲ್ಲಿರುವಾಗಲೇ ಸುರತ್ಕಲ್ ನಲ್ಲಿ ಸಂಘಪರಿವಾರದ ಕಾರ್ಯಕರ್ತರು ಅಮಾಯಕ ಮುಸ್ಲಿಂ ಯುವಕನನ್ನು ಹತ್ಯೆಗೈದಿದ್ದಾರೆ. ಇನ್ನೂ ವಿಪರ್ಯಾಸವೆಂದರೆ ಬೆಳ್ಳಾರೆಗೆ ತೆರಳಿದ ಮುಖ್ಯಮಂತ್ರಿ ಅವರು ಕೆಲ ದಿನಗಳ ಹಿಂದೆ ಹಿಂದುತ್ವ ಕಾರ್ಯಕರ್ತರ ದಾಳಿಗೆ ಬಲಿಯಾದ ಮಸೂದ್ ಅವರ ಮನೆಗೆ ತೆರಳದೇ ದ್ವಿಮುಖ ಧೋರಣೆ ತಳೆದಿದ್ದಾರೆ.
ಕರಾವಳಿಯಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಹಲ್ಲೆಗಳಿಂದಾಗಿ ಜನರು ಭಯದ ವಾತಾವರಣದಲ್ಲಿ ಜೀವಿಸಬೇಕಾದ ಪರಿಸ್ಥಿತಿ ಎದುರಾಗಿದೆ.