ಅನೈತಿಕ ಪೊಲೀಸ್ ಗಿರಿ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ : ಪೊಲೀಸರಿಗೆ ಸಿಎಂ ಸ್ಪಷ್ಟ ಸೂಚನೆ

Prasthutha|

ಮಂಗಳೂರು: ದಕ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಗುಂಪು, ಯಾವುದೇ ಸಿದ್ದಾಂತದವರು ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸ್ ಗಿರಿ ನಡೆಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು.

- Advertisement -

ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿ ಪರೀಶೀಲನೆ ನಡೆಸಿ ಮಾತನಾಡಿದರು ಮಾದಕ ವಸ್ತು ಹಾವಳಿ ಮಂಗಳೂರಿನಲ್ಲಿ ವಿಪರೀತ ಹೆಚ್ಚಾಗುತ್ತಿದೆ. ಇದರಲ್ಲಿ ಭಾಗಿಯಾದವರನ್ನು ಗೂಂಡಾಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಮಳೆಯಿಂದ ಪೂರ್ತಿಹಾನಿಯಾದ ಮನೆಗಳಿಗೆ 5 ಲಕ್ಷ ಪರಿಹಾರಕ್ಕೆ ಇಂದೇ ಆದೇಶ ಹೊರಡಿಸಿದ್ದು, ಮೊದಲಿದ್ದ ರೀತಿಯಲ್ಲೇ ಎ, ಬಿ, ಸಿ ಕೆಟಗರಿಯಲ್ಲಿ ವಿಂಗಡಿಸಿ ಪರಿಹಾರ ನೀಡಲು ಸೂಚನೆ ನೀಡಿದರು. ಕಡಲ ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲು ತೀರ್ಮಾನಿಸಿದ್ದೇವೆ. ಕಡಲ ಕೊರೆತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ಸಮಗ್ರ ಚರ್ಚೆ ಮಾಡಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

- Advertisement -

ಸುಶಿಕ್ಷಿತರ ಜಿಲ್ಲೆ ಮಂಗಳೂರು ಶಿಕ್ಷಣ ಸೂಚ್ಯಂಕದಲ್ಲಿ ಕುಸಿಯುತ್ತಿರುವುದು ಒಳ್ಳೆ ಬೆಳವಣಿಗೆ ಅಲ್ಲ. ಈ ಬಗ್ಗೆ ಡಿಡಿಪಿಐ ಅವರಿಂದ ವಿವರಣೆ ಕೇಳಿದ ಸಿಎಂ. ಉಡುಪಿ, ಮಂಗಳೂರು ಯಾವಾಗಲೂ ಪ್ರಥಮ, ದ್ವಿತೀಯ ಸ್ಥಾನದಲ್ಲಿ ಇರುತ್ತಿತ್ತು. ಈಗೇಕೆ ಹೀಗೆ? ಎಂದು ಪ್ರಶ್ನಿಸಿದರು. ಅತ್ಯಂತ ಹಿಂದುಳಿದ ಜಿಲ್ಲೆ ಚಿತ್ರದುರ್ಗ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವ ಹೊತ್ತಲ್ಲಿ ಅತ್ಯಂತ ಮುಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿಯಲು ಕಾರಣ ಏನು? ಡಿಡಿಪಿಐ ಆದವರು ಬಿಇಒ ಗಳನ್ನು ಈ ಬಗ್ಗೆ ಪ್ರಶ್ನಿಸಬೇಕು. ಆರೋಗ್ಯ ಸೂಚ್ಯಂಕದಲ್ಲೂ ಕುಸಿದಿದೆ. ದಕ ಜಿಲ್ಲೆ 2015 ರಲ್ಲಿ 3 ಸ್ಥಾನದಲ್ಲಿತ್ತು. ಈಗ 23ನೇ ಸ್ಥಾನಕ್ಕೆ ಕುಸಿದಿದೆ. ಏಕೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಎರಡು ವರ್ಷಗಳಿಂದ ಏನು ಪ್ರಗತಿ ಸಾಧಿಸಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ತಾಯಿ ಮಕ್ಕಳ ಮರಣ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದಕ್ಕೆ ಎಂ.ಎಂ.ಆರ್ ಸಮೀಕ್ಷೆಯ ವರದಿಯನ್ನು ಓದಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಇನ್ನು ಮುಂದೆ ಅವರಿಗೆ ನೀಡಿದ ಕ್ವಾಟ್ರಸ್ ಗಳಲ್ಲೇ ನೆಲೆಸುವಂತೆ ಕ್ರಮ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ಬೀಜ, ರಸಗೊಬ್ಬರದ ಕೊರತೆ ಆಗಬಾರದು. ಒಮ್ಮೆ ಬೀಜ, ರಸಗೊಬ್ಬರ ಕೊಟ್ಟರೆ ಮುಗಿಯಿತು ಎಂದು ಅಧಿಕಾರಿಗಳು ವರ್ತಿಸಬಾರದು. ಬೆಳೆಹಾನಿಯಾಗಿ ಮತ್ತೆ ಬೀಜ, ರಸಗೊಬ್ಬರಕ್ಕೆ ಬೇಡಿಕೆ ರೈತರಿಂದ ಬಂದರೆ ಬೇಡಿಕೆ ಪೂರೈಸಬೇಕು ಎಂದು ಸೂಚಿಸಿದರು. ಅಡಕೆಗೆ ಎಲೆಚುಕ್ಕೆ ರೋಗ, ಹಳದಿ ರೋಗ, ಕೀಟ ಬಾದೆ ಯಾವ ಪ್ರಮಾಣದಲ್ಲಿ ಬಂದಿದೆ ಎನ್ನುವ ಬಗ್ಗೆ ಮಾಹಿತಿ ಪಡೆದ ಮುಖ್ಯ್ಮಂತ್ರಿಗಳು ಈ ಸಂಬಂಧ ಕೃಷಿ ವಿಜ್ಞಾನಗಳು ಹಾಗೂ ತಜ್ಞರನ್ನು ಕರೆದು ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್ನಿಂದ 2 ಲಕ್ಷ ಕಿಲೋ ಲೀಟರ್ಗಳವರೆಗೆ ಹೆಚ್ಚಿಸಿದ್ದೇವೆ. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ.ಗಳಷ್ಟು ನೆರವು ನೀಡಿದ್ದೇವೆ. ಇದು ಮೀನುಗಾರ ಸಮುದಾಯಕ್ಕೆ ತಲುಪುತ್ತದೆಯೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಇದರಿಂದ ಸಮುದಾಯಕ್ಕೆ ದೊಡ್ಡ ಅನುಕೂಲವಾಗಿದೆ ಎಂದು ಉತ್ತರಿಸಿದರು.

ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್ ಗಳನ್ನು ಪೆಟ್ರೋಲ್ ಇಂಜಿನ್ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ 4,000 ಸೀಮೆ ಎಣ್ಣೆ ಇಂಜಿನ್ ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗುವುದು ಎಂದು ನಾವು ಆಯವ್ಯವಯದಲ್ಲಿ ಘೋಷಿಸಿದ್ದೇವೆ, ಈ ಕಾರ್ಯಕ್ರಮ ಸರಿಯಾಗಿ ಜಾರಿಯಾವಂತೆ ಕ್ರಮ ವಹಿಸಲು ಅಧಿಕಾರಿಗಳು ಸೂಚಿಸಿದರು.

ಶಕ್ತಿ ಯೋಜನೆಯಿಂದ ಜನರಿಂದ ಮತ್ತು ವಿದ್ಯಾರ್ಥಿ ಸಮೂಹದಿಂದ ಉತ್ತಮ ಸ್ಪಂದನೆ ಇರುವುದರಿಂದ ಸದ್ಯದಲ್ಲೇ 4000 ಹೆಚ್ಚುವರಿ ಬಸ್ ಗಳನ್ನು ಖರೀದಿಸುವುದಾಗಿ ಸಿಎಂ ತಿಳಿಸಿದರು. ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿಗೂ ದೊರಕುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆ ಆರೋಗ್ಯ ಮತ್ತು ಶಿಕ್ಷಣದಲ್ಲಿ ಅತ್ಯಂತ ಹಿಂದುಳಿಯುತ್ತಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಿಎಂ ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಶಾಸಕ ಉಮಾನಾಥ ಕೋಟ್ಯಾನ್ ಅವರು ಗ್ರಾಮ ಪಂಚಾಯ್ತಿ ಕಟ್ಟಡವೊಂದರ ಉದ್ಘಾಟನೆ ತಡೆ ಹಿಡಿದಿದ್ದಕ್ಕೆ ಕಾರಣ ಏನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಎಂ ಯಾವುದೇ ಕಾರಣಕ್ಕೂ ಪ್ರೋಟೋಕಾಲ್ ಉಲ್ಲಂಘಿಸಬಾರದು. ಶಾಸಕರು ಯಾವುದೇ ಪಕ್ಷದವರಿರಲಿ ಅವರನ್ನು ಅಧಿಕಾರಿಗಳು ಜನಪ್ರತಿನಿಧಿಗಳು ಎಂದು ಪರಿಗಣಿಸಿ ಅವರಿಗೆ ಗೌರವ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಸರಕಾರಿ ಆರೋಗ್ಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಪ್ರಶ್ನಿಸುತ್ತಿದ್ದ ವೇಳೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು, “ಜಿಲ್ಲಾ ಉಸ್ತುವಾರಿ ಸಚಿವರೂ, ಆರೋಗ್ಯ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಖಾಲಿ ಇರುವ ಎಲ್ಲಾ ವೈದ್ಯ ಹುದ್ದೆಗಳನ್ನು ಒಂದೇ ದಿನದಲ್ಲಿ ಭರ್ತಿ ಮಾಡಿ” ಎಂದು ಮನವಿ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಕಳೆದ ಐದು ವರ್ಷದಿಂದ ನಿಮ್ಮದೇ ಸರ್ಕಾರ ಇತ್ತು. ಐದು ವರ್ಷದಲ್ಲಿ ಮಾಡದ್ದನ್ನು ನಮಗೆ ಒಂದೇ ದಿನದಲ್ಲಿ ಮಾಡಲು ಹೇಳುತ್ತಿದ್ದೀರಿ ಎಂದರು.

Join Whatsapp
Exit mobile version