Home ಟಾಪ್ ಸುದ್ದಿಗಳು ಪ್ಯಾಲೆಸ್ತೀನ್ ಪರ ನಾಟಕಕ್ಕೆ ಅನುಮತಿ ನಿರಾಕರಣೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

ಪ್ಯಾಲೆಸ್ತೀನ್ ಪರ ನಾಟಕಕ್ಕೆ ಅನುಮತಿ ನಿರಾಕರಣೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬುಧವಾರ ರಂಗಶಂಕರದಲ್ಲಿ ಪ್ಯಾಲೆಸ್ತೀನ್ ಪರವಾಗಿ ಆಯೋಜನೆಯಾಗಿದ ಕಿರು ನಾಟಕ ಮತ್ತು ಕವನ ವಾಚನಕ್ಕೆ ಖ್ಯಾತ ರಂಗಭೂಮಿ ಕಲಾವಿದೆ, ಗಾಯಕಿ ಎಂಡಿ ಪಲ್ಲವಿ ಸೇರಿದಂತೆ ಹಲವು ಕಲಾವಿದರ ಕಾರ್ಯಕ್ರಮಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ಪೊಲೀಸ್ ಅನುಮತಿ ನಿರಾಕರಣೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ವಿಚಾರವಾಗಿ ಪೊಲೀಸರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿದ್ದು, ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರವು ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಕಥೆ, ಕಾವ್ಯ, ನಾಟಕ, ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಡೆಯುವ ಕೆಲಸವನ್ನು ಮಾಡುವುದಿಲ್ಲ. ನಾವು ಸಂವಿಧಾನದ ಮೂಲಸ್ಫೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ. ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕೆ ಒಂದೆರಡು ಅನಾವಶ್ಯಕವಾದ ಗೊಂದಲಗಳು ನಿರ್ಮಾಣವಾಗಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಗೊಂದಲಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕೆಂದು ನಾನು ಪೊಲೀಸ್ ಮಹಾನಿರ್ದೇಶಕರಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದೇನೆ ಎಂದಿದ್ದಾರೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜೊತೆ ಸರ್ಕಾರವು ಸದಾ ನಿಲ್ಲುತ್ತದೆ ಎಂಬುದನ್ನು ತಿಳಿಸಬಯಸುತ್ತೇನೆ. ಆದ್ದರಿಂದ ಯಾವುದೇ ರೀತಿಯ ಗೊಂದಲಗಳನ್ನು ಸೃಷ್ಟಿಸಬಾರದೆಂದು, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆತಂಕಿತರಾಗಬಾರದೆಂದು ಸಿಎಂ ಸಿದ್ದರಾಮಯ್ಯ ವಿನಂತಿಸಿದ್ದಾರೆ.

Join Whatsapp
Exit mobile version