ರಾಯಿಪುರ: ಛತ್ತೀಸಗಡದ ರಾಜಧಾನಿ ರಾಯಪುರದಿಂದ 23 ಕಿಲೋಮೀಟರ್ ದೂರದಲ್ಲಿರುವ ಚಂದ್ರಖುರಿಯ ಕೌಸಲ್ಯ ದೇವಾಲಯಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ತಮ್ಮ ಕೆಲವು ಅನುಯಾಯಿಗಳ ಜೊತೆಗೆ ಭೇಟಿ ನೀಡಿದರು. ಮಾತಾ ಕೌಸಲ್ಯ ದೇವಾಲಯದಲ್ಲಿ ಬಂದು ಪ್ರಾರ್ಥಿಸುವಂತೆ ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಅವರು ಭಾಗವತ್ ರಿಗೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾಗವತ್ ತಮ್ಮ ಸಂಗಡಿಗರೊಂದಿಗೆ ಆಗಮಿಸಿದ್ದರು.
ಇದು ರಾಮನ ತಾಯಿ ಕೌಸಲ್ಯೆಯ ಆಲಯವಾಗಿದ್ದು ಇಲ್ಲಿ ಜಾನುವಾರು ರಕ್ಷಣೆಗೆ ಎಂಥ ವ್ಯವಸ್ಥೆ ಮಾಡಲಾಗಿದೆ ಬಂದು ನೋಡಿ ಎಂದು ಮುಖ್ಯಮಂತ್ರಿಗಳು ಆರೆಸ್ಸೆಸ್ ಮುಖ್ಯಸ್ಥರಿಗೆ ಆಹ್ವಾನ ನೀಡಿದ್ದರು.
ಈ ಬಗ್ಗೆ ರಾಯಪುರದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ,
“ಹದಿನೈದು ವರ್ಷ ಅಧಿಕಾರದಲ್ಲಿದ್ದರೂ ಬಿಜೆಪಿಯು ಚಂದ್ರಖುರಿಯ ಕೌಸಲ್ಯ ಮಂದಿರವನ್ನು ನವೀಕರಿಸುವ ಕೆಲಸವನ್ನೇ ಮಾಡಲಿಲ್ಲ. ನಮ್ಮ ಸರಕಾರ ಅದನ್ನು ನವೀಕರಿಸಿದೆ ಮತ್ತು ಸುತ್ತಣ ಪರಿಸರವನ್ನು ಸುಂದರವಾಗಿಸಿದೆ. ಆದ್ದರಿಂದಲೇ ರಾಯಿಪುರದಲ್ಲಿದ್ದ ಮೋಹನ್ ಭಾಗವತರನ್ನು ಮಾತಾ ಕೌಸಲ್ಯ ದೇವಾಲಯ ನೋಡಲು ಆಹ್ವಾನಿಸಿದೆ” ಎಂದು ಭೂಪೇಶ್ ಬಗೇಲ್ ವಿವರಿಸಿದರು.
ಅಲ್ಲದೆ ನಮ್ಮ ಕಾಂಗ್ರೆಸ್ ಸರಕಾರದ ರಾಮ್ ವನ ಗಮನ ಯೋಜನೆ, ಗೋದಾನ ಮತ್ತು ಜಾನುವಾರು ರಕ್ಷಣೆ ಕೆಲಸಗಳು ಹೇಗೆ ನಡೆದಿದೆ ಎಂಬುದನ್ನು ಮಾತನಾಡುವವರು ನೋಡಲಿ ಎಂಬುದಕ್ಕಾಗಿಯೂ ಆಹ್ವಾನಿಸಿದೆ ಎಂದೂ ಮುಖ್ಯಮಂತ್ರಿ ತಿಳಿಸಿದರು.
ಆರೆಸ್ಸೆಸ್ ನ ಸಹಯೋಗ ಸಮಾವೇಶವು ವರುಷಕ್ಕೊಮ್ಮೆ ನಡೆಯುತ್ತದೆ. ಈ ಬಾರಿ ಅದು ರಾಯಿಪುರದಲ್ಲಿ ಆಯೋಜಿಸಲಾಗಿದೆ. ಭಾಗವತರಲ್ಲದೆ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಸಹ ಕಾರ್ಯವಾಹ ಸೇರಿದಂತೆ ಹಲವು ಮುಖಂಡರು ಭಾಗವಹಿಸುವರು. ಶಿಕ್ಷಣ, ಬುದ್ಧಿಮತ್ತೆ, ಹಣಕಾಸು, ಸೇವೆ, ರಾಷ್ಟ್ರೀಯ ಭದ್ರತೆ ಮತ್ತು ತತ್ಸಂಬಂಧಿ ಚರ್ಚೆಗಳು ನಡೆಯುವುದಾಗಿ ಆರೆಸ್ಸೆಸ್ ಹೇಳಿದೆ.
ಹಸುಗಳ ವಿಷಯದಲ್ಲಿ ರಾಜಕೀಯಕ್ಕೆ ಅವಕಾಶ ಆಗದಂತೆ ಹಳ್ಳಿಗಳಲ್ಲಿ ದನ ದಾನ ಮಾಡುವ ಗೋದಾನ ನ್ಯಾಯ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಹಮ್ಮಿಕೊಂಡಿದೆ. ಹಸುವಿನ ಸೆಗಣಿ ಮತ್ತು ಉಚ್ಚೆಯಿಂದ ಗೊಬ್ಬರ, ಯೂರಿಯಾ ಇತ್ಯಾದಿ ತಯಾರಿಸುವ ಯೋಜನೆಯನ್ನೂ ಜಾರಿಗೆ ತಂದಿದೆ.
ಈ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸುವುದು ಮತ್ತು ತಮ್ಮ ಜಾನುವಾರುಗಳನ್ನು ಜತನದಿಂದ ನೋಡಿಕೊಳ್ಳುವುದು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.