Home ಟಾಪ್ ಸುದ್ದಿಗಳು ಗ್ರಾಪಂ, ಅಧ್ಯಕ್ಷರು, ಸದಸ್ಯರ ಗೌರವಧನ ಮತ್ತಷ್ಟು ಹೆಚ್ಚಳ: ಮುಖ್ಯಮಂತ್ರಿ ಭರವಸೆ

ಗ್ರಾಪಂ, ಅಧ್ಯಕ್ಷರು, ಸದಸ್ಯರ ಗೌರವಧನ ಮತ್ತಷ್ಟು ಹೆಚ್ಚಳ: ಮುಖ್ಯಮಂತ್ರಿ ಭರವಸೆ

ಬೆಳಗಾವಿ: ರಾಜ್ಯದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರ ಗೌರವ ಧನವನ್ನು ಮತ್ತಷ್ಟು ಹೆಚ್ಚಳ ಮಾಡುವ ಕುರಿತು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ತಿಗೆ ತಿಳಿಸಿದರು.


ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಸಿಕವಾಗಿ 6 ಸಾವಿರ ರೂಪಾಯಿ, ಉಪಾಧ್ಯಕ್ಷರಿಗೆ 4 ಸಾವಿರ ರೂಪಾಯಿ ಹಾಗೂ ಸದಸ್ಯರಿಗೆ 2 ಸಾವಿರ ರೂಪಾಯಿ ಗೌರವವನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿದರು.
ಮಾಸಿಕ ವೇತನ ಹೆಚ್ಚಳ ಮಾಡುವ ಬೇಡಿಕೆ ಕುರಿತು ಮುಂದಿನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಹಂತದಲ್ಲಿ ಹೆಚ್ಚಳ ಮಾಡಿದ್ದೇವೆ. ಇದು ಆರಂಭ ಮಾತ್ರವಾಗಿದ್ದು, ಮುಂದೆ ನಾವು ಅವರ ಪರವಾಗಿಯೇ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊರಗೆ ಕೈಗೊಳ್ಳುವ ಅಧಿಕೃತ ಪ್ರಯಾಣಗಳಿಗೆ ನಿಯಮಾನುಸಾರ ಪ್ರಯಾಣ ಭತ್ಯೆ ಹಗೂ ದಿನ ಭತ್ಯೆ ಪಡೆಯಬಹುದಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.


ಇದಕ್ಕೂ ಮಾತನಾಡಿದ ಅನಿಲ್ ಕುಮಾರ್, ಈಗಿನ ಖರ್ಚುಗಳ ಅನುಸಾರ ಮಾಸಿಕ ಗೌರವ ಧನ 10 ಸಾವಿರ ರೂಪಾಯಿವರೆಗೂ ಏರಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ಇದನ್ನು ಈಡೇರಿಸಿದರೆ, ತುಂಬು ಹೃದಯದಿಂದ ತಮ್ಮನ್ನು ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದರು.

Join Whatsapp
Exit mobile version