ನವದೆಹಲಿ: ಮದ್ಯನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ಆಡಳಿತ ನಡೆಸುತ್ತಿದ್ದಾರೆ. ಇಂದು ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಎರಡನೇ ಸರ್ಕಾರಿ ಆದೇಶವನ್ನು ಹೊರಡಿಸಿದ್ದಾರೆ.
ಈ ಬಾರಿ ಆರೋಗ್ಯ ಇಲಾಖೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾರ್ಚ್ 24 ರಂದು ಇಡಿ ಕಸ್ಟಡಿಯಿಂದ ಮೊದಲ ಆದೇಶ ಹೊರಡಿಸಿದ್ದರು.
ತಮ್ಮ ಆದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಜಲಮಂಡಳಿ ಸಚಿವರನ್ನು ಕೋರಿದ್ದರು. ತಮ್ಮ ಆದೇಶ ಹೊರಬಿದ್ದ ನಂತರ, ಜೈಲಿಗೆ ಹೋದ ನಂತರವೂ ಸಿಎಂ ಕೇಜ್ರಿವಾಲ್ ಗೆ ದೆಹಲಿ ಜನರ ಬಗ್ಗೆ ಕಾಳಜಿ ಇದೆ ಎಂದು ಅತಿಶಿ ಹೇಳಿದ್ದರು. ಅವರು ಸಾರ್ವಜನಿಕರ ಹಿತಾಸಕ್ತಿಗಳಿಗೆ ಸಂಪೂರ್ಣವಾಗಿ ಬದ್ಧರಾಗಿದ್ದಾರೆ. ಅವರು ಎಲ್ಲಿಯೇ ನೆಲೆಸಿದ್ದರೂ ದೆಹಲಿಯ ಜನರ ಸೇವೆಯನ್ನು ಮುಂದುವರಿಸುತ್ತಾರೆ. ಜೈಲಿಗೆ ಹೋದರೆ ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ ಎಂದಿದ್ದರು.