ಹಿಮಾಚಲ ಪ್ರದೇಶ: ರಾಜ್ಯದ ಮಂಡಿ ಜಿಲ್ಲೆಯ ಹಲವೆಡೆ ಮೇಘಸ್ಪೋಟಗೊಂಡಿದ್ದು, ಭಾರೀ ಪ್ರವಾಹ ಉಂಟಾಗಿದೆ. ಕಳೆದ 32 ಗಂಟೆಗಳ ಅವಧಿಯಲ್ಲಿ ಪ್ರವಾಹಕ್ಕೆ ಸಿಲುಕಿ 10 ಜನ ಸಾವನ್ನಪ್ಪಿದ್ದು, 34 ಜನರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಎಸ್) ಮಾಹಿತಿ ನೀಡಿದೆ.
ಎಸ್ಇಒಎಸ್ ನೀಡಿರುವ ಅಧಿಕೃತ ಅಂಕಿಅಂಶದಂತೆ, ರಾಜ್ಯದಲ್ಲಿ 16 ಕಡೆ ಮೇಘಸ್ಫೋಟವಾಗಿದೆ. ಮಂಡಿಯ ಮೂರು ಕಡೆ ಪ್ರವಾಹ ಸೃಷ್ಟಿಯಾಗಿದೆ. ಇದು ಭೀಕರ ಹಾನಿಗೆ ಕಾರಣವಾಗಿದೆ. ಹೀಗಾಗಿ, ಮಂಡಿ ಮಳೆಗಾಲದ ವಿಪತ್ತಿನ ಕೇಂದ್ರಬಿಂದುವಾಗಿ ರೂಪುಗೊಂಡಿದೆ.
ಇನ್ನು ತುನಾಗ್, ಕರ್ಸೋಗ್ ಮತ್ತು ಗೋಹರ್ ಉಪವಿಭಾಗಗಳ ಹಲವಾರು ಪ್ರದೇಶಗಳಲ್ಲಿ ಮೇಘಸ್ಫೋಟದಿಂದ ಭಾರೀ ಆಸ್ತಿಪಾಸ್ತಿ ನಷ್ಟವಾಗಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ಹಲವು ಸಾವು-ನೋವುಗಳು ವರದಿಯಾಗಿವೆ.
ಸಿಯಾಂಜ್ (ಗೋಹರ್)ನಲ್ಲಿ ಎರಡು ಮನೆ ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ಒಂಬತ್ತು ಜನರು ಕಾಣೆಯಾಗಿದ್ದಾರೆ. ಈ ಪೈಕಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಎಸ್ಇಒಎಸ್ ಪ್ರಕಟಣೆ ತಿಳಿಸಿದೆ.
ಕುಟ್ಟಿ ಬೈಪಾಸ್ (ಕರ್ಸೋಗ್)ನಲ್ಲಿ ಮೇಘಸ್ಪೋಟದಿಂದ ಇಬ್ಬರು ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ. ಏಳು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರೆದಿದೆ. ಕರ್ಸೋಗ್, ಗೋಹರ್ ಮತ್ತು ತುನಾಗ್ನಲ್ಲಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.