ನವದೆಹಲಿ: ಪಂಜಾಬ್ ಮತ್ತು ಹರ್ಯಾಣದಲ್ಲಿ ಭತ್ತದ ಖರೀದಿ ವಿಳಂಬಗೊಳಿಸುವ ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ) ಬೆಂಬಲಿತ ರೈತರು ಸಂಸದ, ಶಾಸಕರ ನಿವಾಸಗಳಿಗೆ ನುಗ್ಗಲೆತ್ನಿಸಿದಾಗ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ನಿವಾಸಗಳಿಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದೆ.
ರೈತ ಪರ ಹೋರಾಟಗಾರರು ಮತ್ತು ಸರ್ಕಾರದ ನಡುವೆ ಹಲವೆಡೆ ಘರ್ಷಣೆ ನಡೆಯುತ್ತಿದ್ದು, ರೈತರು ಜನಪ್ರತಿನಿಧಿಗಳ ನಿವಾಸ ತಲುಪದಂತೆ ಪೊಲೀಸರು ಬ್ಯಾರಿಕೇಡ್ ಹಾಕಲಾಗಿದೆ. ಈ ಮಧ್ಯೆ ಬ್ಯಾರಿಕೇಡ್ ಗಳನ್ನು ಮುರಿದು ರೈತರು ಮುನ್ನುಗ್ಗಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಲ್ ನಲ್ಲಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಿವಾಸದ ಹೊರಗೆ ಅರೆಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಮಾತ್ರವಲ್ಲ ಅವರ ಮನೆಯನ್ನು ಸಂಪರ್ಕಿಸುವ ರಸ್ತೆಗಳನ್ನು ಹರ್ಯಾಣ ಪೊಲೀಸರು ಬಂದ್ ಮಾಡಿದ್ದಾರೆ.
ಶಾಂತಿಯುತ ಪ್ರತಿಭಟನೆ ಜನರ ಹಕ್ಕಾಗಿದ್ದು, ಪ್ರತಿಭಟನೆಯ ನೆಪದಲ್ಲಿ ಯಾವುದೇ ರೀತಿಯ ಹಿಂಸಾಚಾರದಲ್ಲಿ ಪಾಲ್ಗೊಂಡರೆ ಅಥವಾ ಹೆದ್ದಾರಿಗೆ ತಡೆ ಒಡ್ಡಿದರೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಗಾರು ವಿಳಂಬವಾದ ಕಾರಣ ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತ ಖರೀದಿಯನ್ನು ಅಕ್ಟೋಬರ್ 11 ರವರೆಗೆ ಕೇಂದ್ರ ಸರ್ಕಾರ ಮುಂದೂಡಿದೆ.