ಬೆಂಗಳೂರು: ಶುಕ್ರವಾರದಂದು ವಿಜಯನಗರ ಎಂ.ಸಿ. ಬಡಾವಣೆಯ ಬಿಜಿಎಸ್ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
‘ಗಲಾಟೆ ವೇಳೆ ಕೆಲವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಲಾಗಿದ್ದು, ಕಲ್ಲು ತೂರಾಟವೂ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿ ಹಲವರು ಗಾಯಗೊಂಡಿದ್ದಾರೆ. ಗಲಾಟೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಮೈದಾನ ಬಿಬಿಎಂಪಿ ಅಧೀನದಲ್ಲಿರುವುದರಿಂದ ಮಾರ್ಚ್ 19ರಂದು ಸ್ತ್ರೀಶಕ್ತಿ ಮಹಿಳಾ ಸಮಾವೇಶ ಆಯೋಜಿಸಲು ಉಮಾಶಂಕರ್ ಎಂಬುವವರು ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿ ಪಡೆದಿದ್ದರು. ಶುಕ್ರವಾರ ಸಂಜೆ ಮೈದಾನದಲ್ಲಿ ಸಮಾವೇಶದ ತಯಾರಿಗಾಗಿ ಬ್ಯಾನರ್. ಫೆಕ್ಸ್ ಕಟ್ಟುತ್ತಿದ್ದರು. ‘ಎದುರಾಳಿ ಗುಂಪಿನ ಸದಸ್ಯರು, ಮೈದಾನದೊಳಗೆ ನುಗ್ಗಿ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡುವುದಿಲ್ಲವೆಂದು ಹೇಳಿದ್ದರು. ಅದೇ ಕಾರಣಕ್ಕೆ ಮಾತಿನ ಚಕಮಕಿ ನಡೆದು, ಎರಡೂ ಗುಂಪಿನ ನಡುವೆ ಮಾರಾಮಾರಿ ನಡೆಯಿತು’ ಎಂದು ಹೇಳಿದರು. ‘ಮೈದಾನದಲ್ಲಿ ಮಹಿಳೆಯರೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಪೊಲೀಸರು ಎಚ್ಚರಿಕೆ ನೀಡಿದರೂ ಜನರು ಮೈದಾನ ಬಿಟ್ಟು ಕದಲಲಿಲ್ಲ. ಕೆಲವರು ದೊಣ್ಣೆ ಹಿಡಿದು ಹಲ್ಲೆ ಮಾಡುತ್ತಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂದು ತಿಳಿದ ಪೊಲೀಸರು ಲಾಠಿ ಪ್ರಹಾರ ನಡೆಸಿ, ಗುಂಪನ್ನು ಚದುರಿಸಿದರು. ಸದ್ಯ ಸ್ಥಳದಲ್ಲಿ ಪೊಲೀಸರ ಕಾವಲು ಹೆಚ್ಚಿಸಲಾಗಿದೆ’ ಎಂದು ಅವರು ಹೇಳಿದರು.