‘ಪ್ರಧಾನ ಕಾರ್ಯದರ್ಶಿ’ ಸ್ವಘೋಷಣೆ ವಿವಾದ| ವಿ.ಕೆ ಶಶಿಕಲಾ ವಿರುದ್ಧ ಎಐಎಡಿಎಂಕೆ ದೂರು

Prasthutha|

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆ ವಿ.ಕೆ ಶಶಿಕಲಾ ವಿರುದ್ಧ ಎಐಎಡಿಎಂಕೆ ದೂರು ನೀಡಿದೆ.

- Advertisement -

ನಾಲ್ಕು ವರ್ಷಗಳ ಹಿಂದೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ಅವರನ್ನು ತೆಗೆದುಹಾಕಿದ್ದರೂ ಈಗಲೂ ತಾನು ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಪಕ್ಷದ ಸಂಘಟನಾ ಕಾರ್ಯದರ್ಶಿ ಡಿ. ಜಯಕುಮಾರ್ ಮಾಂಬಳಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿಯ ಸೆಕ್ಷನ್ 153 ಎ, 419 ಮತ್ತು 505 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಅಕ್ಟೋಬರ್ 17 ರಂದು, ಶಶಿಕಲಾ ಅವರು ಎಐಎಡಿಎಂಕೆ ಧ್ವಜ ಇರುವ ಕಾರಿನಲ್ಲಿ ಬಂದು ಎಂಜಿಆರ್ ಮತ್ತು ಜಯಲಲಿತಾ ಸಮಾಧಿಗಳಿಗೆ ಗೌರವ ಸಲ್ಲಿಸಿ, ಪಕ್ಷದ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚೆನ್ನೈನ ರಾಮಪುರದ ಎಂಜಿಆರ್ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಎಐಎಡಿಎಂಕೆ ಧ್ವಜಾರೋಹಣ ಮಾಡಿದ್ದರು. ಸಮಾರಂಭದಲ್ಲಿ ಅನಾವರಣಗೊಳಿಸಿದ ಫಲಕದಲ್ಲಿ ಶಶಿಕಲಾ ಅವರನ್ನು ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿ ಎಂದು ಬರೆದಿರುವುದು ವಿವಾದವಾಗಿತ್ತು.

- Advertisement -

ಶಶಿಕಲಾ ಅವರಿಗೆ ಪಕ್ಷದ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



Join Whatsapp