ನವದೆಹಲಿ : ಹೊಸ ಸಿಬಿಐ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಲ್ಲಿ ಸಿಜೆಐ ಎನ್.ವಿ ರಮಣ ಅವರು ನಿಯಮವೊಂದನ್ನು ಉಲ್ಲೇಖಿಸಿದುದರಿಂದ, ಪ್ರಧಾನಿ ನರೇಂದ್ರ ಮೋದಿ ಸರಕಾರದ ಆದ್ಯತೆಯ ಇಬ್ಬರು ಅಭ್ಯರ್ಥಿಗಳು ಆಯ್ಕೆಪಟ್ಟಿಯಿಂದ ಹೊರಬಿದ್ದಿದ್ದಾರೆ.
ಹೊಸ ಸಿಬಿಐ ಮುಖ್ಯಸ್ಥರನ್ನು ಆರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆ ನಡೆದಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ನಿಯಮವೊಂದನ್ನು ಉಲ್ಲೇಖಿಸಿದ್ದರು. ಮೂಲಗಳ ಪ್ರಕಾರ, ಸಿಜೆಐ ಅವರು ಆರು ತಿಂಗಳ ನಿಯಮವನ್ನು ಉಲ್ಲೇಖಿಸಿದ್ದರೆನ್ನಲಾಗಿದೆ.
ಸಿಬಿಐ ಮುಖ್ಯಸ್ಥರ ಆಯ್ಕೆಯ ವೇಳೆ ಈ ಹಿಂದೆ ಯಾವತ್ತೂ ಈ ನಿಯಮ ಉಲ್ಲೇಖಿಸಿರಲಿಲ್ಲ ಎನ್ನಲಾಗಿದೆ. ಆಯ್ಕೆ ಸಮಿತಿ ಕಾನೂನಿಗೆ ಬದ್ಧವಾಗಿರಬೇಕಿದೆ ಎಂದೂ ಅವರು ಹೇಳಿದ್ದರು ಎನ್ನಲಾಗಿದೆ. ಸಮಿತಿಯಲ್ಲಿದ್ದ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧುರಿ ಕೂಡ ಇದೇ ನಿಯಮವನ್ನು ಬೆಂಬಲಿಸಿದ್ದರಿಂದ ತ್ರಿಸದಸ್ಯ ಸಮಿತಿಯಲ್ಲಿ ಇದಕ್ಕೆ ಬಹುಸಂಖ್ಯಾತ ಬೆಂಬಲ ದೊರಕಿದೆ.
ಸಿಜೆಐ ಅವರ ಈ ನಿಲುವಿನಿಂದಾಗಿ ಪ್ರಧಾನಿ ಮೋದಿ ಸರಕಾರದ ಆದ್ಯತೆಯ ಅಭ್ಯರ್ಥಿಗಳಾಗಿದ್ದ ಬಿಎಸ್ ಎಫ್ ಮುಖ್ಯಸ್ಥ ರಾಕೇಶ್ ಆಸ್ಥಾನ ಮತ್ತು ಐಎನ್ ಎ ಮುಖ್ಯಸ್ಥ ವೈ.ಸಿ. ಮೋದಿ ಹೆಸರು ಕೈಬಿಡಲಾಗಿದೆ. ಸರಕಾರದ ಪಟ್ಟಿಯಲ್ಲಿ ಈ ಹೆಸರುಗಳು ಮೇಲ್ಪಂಕ್ತಿಯಲ್ಲಿದ್ದವು ಎನ್ನಲಾಗಿದೆ. ಆ.೩೧ರಂದು ಆಸ್ಥಾನ ಮತ್ತು ಮೇ ೩೧ರಂದು ವೈ.ಸಿ. ಮೋದಿ ನಿವೃತ್ತರಾಗಲಿದ್ದಾರೆ.
ಸೇವೆಯಿಂದ ನಿವೃತ್ತರಾಗಲು ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಸಮಯ ಹೊಂದಿರುವ ಅಧಿಕಾರಿಗಳನ್ನು ಪೊಲೀಸ್ ಮುಖ್ಯಸ್ಥರ ಹುದ್ದೆಗಳಿಗೆ ಪರಿಗಣಿಸಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ನ್ಯಾ. ರಮಣ ಉಲ್ಲೇಖಿಸಿದ್ದರ ಪರಿಣಾಮವಾಗಿ ಸರಕಾರದ ಪ್ರಥಮ ಆದ್ಯತೆಯ ಅಭ್ಯರ್ಥಿಗಳಿಗೆ ಹುದ್ದೆ ಕೈತಪ್ಪಿದೆ.