Home ಟಾಪ್ ಸುದ್ದಿಗಳು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಬಿಜೆಪಿ ಸರಕಾರದ ಅಸಾಂವಿಧಾನಿಕ ನಡೆಯನ್ನು ನಾಗರಿಕರು ಪ್ರತಿರೋಧಿಸಬೇಕು: ಪಾಪ್ಯುಲರ್ ಫ್ರಂಟ್

ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಬಿಜೆಪಿ ಸರಕಾರದ ಅಸಾಂವಿಧಾನಿಕ ನಡೆಯನ್ನು ನಾಗರಿಕರು ಪ್ರತಿರೋಧಿಸಬೇಕು: ಪಾಪ್ಯುಲರ್ ಫ್ರಂಟ್

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲು ಹೊರಟಿರುವ ರಾಜ್ಯ ಬಿಜೆಪಿ ಸರಕಾರದ ಕ್ರಮವು ಅಸಾಂವಿಧಾನಿಕವಾಗಿದ್ದು, ಇದು ಅಲ್ಪಸಂಖ್ಯಾತರನ್ನು ಮತ್ತಷ್ಟು ಗುರಿಪಡಿಸುವ ದುರುದ್ದೇಶವನ್ನು ಹೊಂದಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಧಾರ್ಮಿಕ ಸ್ವಾತಂತ್ರ್ಯವು ಭಾರತದ ಸಂವಿಧಾನವು ಖಾತರಿಪಡಿಸಿದ ಒಂದು ಮೂಲಭೂತ ಹಕ್ಕಾಗಿದೆ. ಸಂವಿಧಾನದ ವಿಧಿ 25ರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿ ತನಗೆ ಇಷ್ಟವಾದ ಧರ್ಮವನ್ನು ಅಂಗೀಕರಿಸುವ, ಆಚರಿಸುವ, ಪ್ರಚಾರಪಡಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ. ಆದರೆ ಅಲ್ಪಸಂಖ್ಯಾತರ ವಿರೋಧಿಯಾಗಿರುವ ಬಿಜೆಪಿ ಸರಕಾರವು ಈ ಹಕ್ಕನ್ನು ಬಲವಂತದ ಕಾನೂನಿನ ಮೂಲಕ ದಮನಿಸಲು ಪ್ರಯತ್ನಿಸುತ್ತಿದೆ. ಬಲವಂತದ ಮತಾಂತರಕ್ಕೆ ಯಾವುದೇ ಅವಕಾಶವಿಲ್ಲದಿದ್ದರೂ, ಇದೀಗ ಅದರ ನಿಯಂತ್ರಣಕ್ಕೆ ಪ್ರತ್ಯೇಕವಾಗಿ ಕಾನೂನು ರೂಪಿಸುತ್ತಿರುವುದರ ಹಿಂದೆ ಬಿಜೆಪಿ ಸರಕಾರವು ರಾಜಕೀಯ ಲೆಕ್ಕಾಚಾರವನ್ನು ಹೊಂದಿರುವುದು ಸ್ಪಷ್ಟವಾಗಿದೆ. ಈಗಾಗಲೇ ಮಧ್ಯ ಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್ ಮೊದಲಾದ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಈ ವಿವಾದಿತ ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿದ್ದು, ಇದು ಪ್ರಮುಖವಾಗಿ ಮುಸ್ಲಿಮ್, ಕ್ರಿಶ್ಚಿಯನ್, ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ವ್ಯವಸ್ಥಿತವಾಗಿ ಗುರಿಪಡಿಸುತ್ತಿರುವುದು ವರದಿಯಾಗಿದೆ. ಈಗಾಗಲೇ ರಾಜ್ಯದಲ್ಲಿ ಸಂಘಪರಿವಾರದ ಶಕ್ತಿಗಳು ಭಾವನಾತ್ಮಕ ವಿಚಾರಗಳ ಮೂಲಕ ರಾಜ್ಯದ ಅಲ್ಪಸಂಖ್ಯಾತರನ್ನು ನಿರಂತರವಾಗಿ ಬೇಟೆಯಾಡುತ್ತಿದ್ದು, ಈ ಕಾನೂನನ್ನು ಅವರು ಮತ್ತೊಂದು ಅಸ್ತ್ರವಾಗಿ ಬಳಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದಾಗ್ಯೂ ಪ್ರಸಕ್ತ ಬಿಜೆಪಿ ಸರಕಾರವು ಭ್ರಷ್ಟಾಚಾರ, ಹಗರಣದಲ್ಲಿ ಮುಳುಗಿ ಹೋಗಿದ್ದು, ಜನರಿಂದ ಬಹಳಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಸಚಿವ ಸಂಪುಟದ ಈ ತುರ್ತು ನಿರ್ಧಾರವನ್ನು ಜನರ ಹಾದಿ ತಪ್ಪಿಸುವ ಪ್ರಯತ್ನದ ಭಾಗವಾಗಿಯೂ ನೋಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ದಮನಿತ ವರ್ಗಗಳನ್ನು ವಿಶೇಷವಾಗಿ ಅಲ್ಪಸಂಖ್ಯಾತರನ್ನು ಗುರಿಪಡಿಸುವ ಈ ಕಾನೂನನ್ನು ರಾಜ್ಯ ಸರಕಾರವು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು. ರಾಜ್ಯಪಾಲರು ಕೂಡ ಇದಕ್ಕೆ ಅಂಕಿತ ಹಾಕದೇ ನಾಗರಿಕರ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು ಮತ್ತು ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಖಾತರಿಪಡಿಸಬೇಕು. ಹಾಗೆಯೇ ಸುಗ್ರೀವಾಜ್ಞೆಗಳ ಮೂಲಕ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿರುವ ಬಿಜೆಪಿ ಸರಕಾರದ ನಡೆಗಳನ್ನು ಪ್ರಜಾಸತ್ತಾತ್ಮಕ ವಿಧಾನದಲ್ಲಿ ಪ್ರತಿರೋಧಿಸಲು ನಾಗರಿಕ ಸಮುದಾಯವು ಮುಂದೆ ಬರಬೇಕೆಂದು ನಾಸಿರ್ ಪಾಶ ಕರೆ ನೀಡಿದ್ದಾರೆ.

Join Whatsapp
Exit mobile version