ಬೆಂಗಳೂರು: ಪಿಎಸ್ ಐ ಅಕ್ರಮ ನೇಮಕದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮತ್ತಷ್ಟು ತೀವ್ರಗೊಳಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕೆಯ ಮೇಲೆ ನೋಟೀಸ್ ಜಾರಿಗೊಳಸಿರುವ ಬೆನ್ನಲ್ಲೇ ನಗರದ ಠಾಣೆಯೊಂದರ ಸಬ್ ಇನ್ಸ್ ಪೆಕ್ಟರ್ ರೊಬ್ಬರು ನಾಪತ್ತೆಯಾಗಿದ್ದಾರೆ.
ಹಿಂದೆ ಪೊಲೀಸ್ ಪೇದೆಯಾಗಿದ್ದ ಸಮಯದಲ್ಲಿ ಎಡಿಜಿಪಿ ದರ್ಜೆಯ ಅಧಿಕಾರಿಯ ಗನ್ ಮೆನ್ ಅಗಿ ಕೆಲಸ ಮಾಡಿ ಬಳಿಕ ಪರೀಕ್ಷೆ ಬರೆದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪಿಎಸ್ ಐ ಆಗಿರುವ ಸಬ್ ಇನ್ಸ್ ಪೆಕ್ಟರ್ ಗೆ , ಸಿಐಡಿ ಅಧಿಕಾರಿಗಳು ನೋಟೀಸ್ ನೀಡಿದ್ದರು. ನೋಟಿಸ್ ಗೆ ಹೆದರಿ ನಾಪತ್ತೆಯಾಗಿದ್ದು ಅವರ ಪತ್ತೆಗೆ ಶೋಧ ನಡೆಸಲಾಗಿದೆ.
ಪಿಎಸ್ಐ ಶರೀಫ್ ಹಲವು ಮಂದಿ ಅಭ್ಯರ್ಥಿಗಳಿಗೆ ಅಕ್ರಮವಾಗಿ ಪಿಎಸ್ ಐ ಹುದ್ದೆಗೆ ನೇಮಕಾತಿ ಅಗಲು ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ.
ಶರೀಫ್ ಗೆ ವಿಚಾರಣೆಗೆ ಹಾಜರಾಗಲು ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ ಶರೀಫ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಅಧಿಕಾರಿಗಳು ಹುಡುಕಾಟ ಶುರುಮಾಡಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಸಿಐಡಿ ಕಸ್ಟಡಿಯಲ್ಲಿದ್ದು, ಅಮಾನತುಗೊಂಡಿರುವ ಅಧಿಕಾರಿಗೆ ನಿದ್ದೆಯೇ ಬರುತ್ತಿಲ್ಲ ಎಂದು ರಂಪಾಟ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.