ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ : ಅಜಿತ್ ದೋವಲ್ ಅವರನ್ನು ಭೇಟಿಯಾದ ಸಿಐಎ ಮುಖ್ಯಸ್ಥ

Prasthutha|

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕಾ ಬೇಹುಗಾರಿಕಾ ಸಂಸ್ಥೆ ಸಿಐಎ ಮುಖ್ಯಸ್ಥ ವಿಲಿಯಮ್ ಬರ್ನ್ಸ್ ಅವರನ್ನು ದೆಹಲಿಯಲ್ಲಿ ಭೇಟಿಯಾದರು.

ವಿಶ್ವಸಂಸ್ಥೆಯ ನಿರ್ಬಂಧ ಪಟ್ಟಿಯಲ್ಲಿರುವ ವ್ಯಕ್ತಿಯೋರ್ವರನ್ನು ಅಫ್ಘಾನಿಸ್ತಾನದ ನೂತನ ಪ್ರಧಾನಿಯನ್ನಾಗಿ ಘೋಷಿಸಿದ ದಿನದಂದು ಈ ಭೇಟಿ ನಡೆದಿರುವುದು ಸಾಕಷ್ಟು ಮಹತ್ವ ಪಡೆದಿದೆ.

- Advertisement -

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಭದ್ರತಾ ಸಮಸ್ಯೆಗಳ ಕುರಿತು ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಜಿತ್ ದೋವಲ್ ಅವರು ಇಂದು ದೆಹಲಿಯಲ್ಲಿ ರಷ್ಯಾದ ಸಹವರ್ತಿ ನಿಕೋಲಾಯ್ ಪತ್ರುಶೇವ್ ಅವರನ್ನೂ ಭೇಟಿಯಾಗುತ್ತಿದ್ದಾರೆ. ಚೀನ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳು ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದ ಆಂತರಿಕ ವ್ಯವಹಾರದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ನಡೆಸುವುದು ಭಾರತದ ಕಳವಳಕ್ಕೆ ಪ್ರಮುಖ ಕಾರಣವಾಗಿದೆ. ಪಾಕಿಸ್ತಾನ ತನ್ನ ಹಿಂಸಾ ಸಂಸ್ಕ್ರತಿಯನ್ನು ಗಡಿಯಾಚೆಗೂ ಮುಂದುವರಿಸುತ್ತಿದೆ ಭಾರತ ಆರೋಪಿಸಿದೆ. ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಮುಲ್ಲಾ ಮುಹಮ್ಮದ್ ಹಸನ್ ಅಖುಂದ್ ಅವರನ್ನು ಅಫ್ಘಾನಿಸ್ತಾನದ ನೂತನ ಹಂಗಾಮಿ ಅಧ್ಯಕ್ಷರಾಗಿ ಘೋಷಿಸಲಾಗಿತ್ತು.

- Advertisement -