Home ಜಾಲತಾಣದಿಂದ ಕನ್ನಡ ಕಲಿಯಿರಿ, ಅದು ಬಹಳ ಸುಲಭ: ಚಿರಂಜೀವಿ ಸಿಂಗ್

ಕನ್ನಡ ಕಲಿಯಿರಿ, ಅದು ಬಹಳ ಸುಲಭ: ಚಿರಂಜೀವಿ ಸಿಂಗ್

ಬೆಂಗಳೂರು: ಕನ್ನಡ ಕಲಿಯಿರಿ, ಅದು ಬಹಳ ಸುಲಭ ಎಂದು ರಾಜ್ಯ ಸರಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಹೇಳಿದರು.
ಅವರು ಬೆಂಗಳೂರಿನ ಬಿಫ್ಟ್ ಸಭಾಂಗಣದಲ್ಲಿ ಫೆಡರೇಷನ್ ಆಫ್ ಮುಸ್ಲಿಮ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ನಡೆದ ನವ ಕರ್ನಾಟಕ ಪ್ರಕಾಶನ ಪ್ರಕಟಿತ “ಕನ್ನಡೇತರರಿಗೆ ಕನ್ನಡ: ಕಲಿಸುವವರ ಕೈಪಿಡಿ” ಪುಸ್ತಕದ ಲೋಕಾರ್ಪಣೆ ಸಂದರ್ಭದಲ್ಲಿ ಮಾತಾಡುತ್ತಿದ್ದರು.

ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಕಲಿಯುವುದು ಅಗತ್ಯ, ಅಷ್ಟೇ ಅಲ್ಲ, ಕಲಿಯುವುದು ಸುಲಭವೂ ಕೂಡ. ವಿವಿಧ ಧಾರ್ಮಿಕ, ಭಾಷಿಕ ಸಮುದಾಯಗಳು ನಾಡಿನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳಲು ಕನ್ನಡ ಭಾಷೆ ಸಹಾಯಕವಾಗುತ್ತದೆ. ಕನ್ನಡ ಬಾರದೇ ಇರುವವರಿಗೆ ಕನ್ನಡ ಕಲಿಸುವ ಅನೇಕ ಕೋರ್ಸುಗಳು ಇವತ್ತು ಇವೆ. ಈ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿರುವ ಭಾಷಾ ವಿಜ್ಞಾನಿ ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷರವರು, ಕನ್ನಡೇತರರಿಗೆ ಕನ್ನಡ ಕಲಿಸುವವರಿಗಾಗಿ ಬರೆದಿರುವ ಈ ಪುಸ್ತಕ ತುಂಬಾ ಉಪಯುಕ್ತವಾಗಿದೆ ಎಂದು ಚಿರಂಜೀವಿ ಸಿಂಗ್ ಹೇಳಿದರು.


“ನನ್ನ ಹಾಗೆ ಕನ್ನಡ ಭಾಷೆಯನ್ನು ಕಲಿತ ಅನೇಕರು ಆಡಳಿತ ಮತ್ತು ಇತರ ಕ್ಷೇತ್ರಗಳಲ್ಲಿ ಜನಪರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ಭಾಷೆ ನಮ್ಮನ್ನು ಒಂದಾಗಿ ಬೆಸೆಯುತ್ತದೆ” ಎಂದು ಅವರು ಈ ವೇಳೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಭಾಷಾ ವಿಜ್ಞಾನಿ, ಡಾ.ಎ.ಮುರಿಗೆಪ್ಪನವರು ಮಾತನಾಡಿ, “ಅಬ್ದುಲ್ ರೆಹಮಾನ್ ಪಾಷರವರು, ಈ ಕೈಪಿಡಿಯನ್ನು ಇದೇ ಕ್ಷೇತ್ರದ ನಾಲ್ಕಾರು ಇತರ ಪುಸ್ತಕಗಳನ್ನು ಓದಿ ಬರೆದಿಲ್ಲ. ಭಾಷೆಯನ್ನು ಕಲಿಸುವ ಕುರಿತು ಇರುವ ಸಿದ್ಧಾಂತ ಮತ್ತು ಕಾರ್ಯವಿಧಾನಗಳನ್ನು ತಾವೇ ನಾಲ್ಕು ದಶಕಗಳ ಕಾಲ ಬಳಸಿ ಸಾವಿರಾರು ಜನ ಕನ್ನಡೇತರರಿಗೆ ಕನ್ನಡ ಕಲಿಸಿದ ಅನುಭವದಿಂದ ಈ ಕೈಪಿಡಿಯನ್ನು ನಮಗೆ ಅರ್ಪಿಸಿದ್ದಾರೆ. ಪ್ರತಿಯೊಂದು ಹಂತದಲ್ಲಿಯೂ ಅವರು ಕೊಡುವ ಉದಾಹರಣೆಗಳು, ಪ್ರಸಂಗಗಳು ಕನ್ನಡ ಭೋಧನೆಗೆ ಪೂರಕ ಸಾಧನಗಳನ್ನು ಒದಗಿಸುತ್ತವೆ. ಅವರು ಬಳಸುವ ಸರಳ ಶೈಲಿ, ಓದುಗರೊಂದಿಗೆ ಸಂಭಾಷಿಸುವಂತೆ ಬರೆಯುವ ವಿಧಾನ ಇಂಥ ತಾಂತ್ರಿಕ ಬರವಣಿಗೆಗೆ ಉತ್ತಮ ಮಾದರಿಯಾಗಿದೆ.” ಎಂದರು.

ಈ ಪುಸ್ತಕದ ಬಿಡುಗಡೆಯ ಸಮಾರಂಭಕ್ಕೆ ಮುಂಚೆ, ಕನ್ನಡ ಶಿಕ್ಷಕರಿಗಾಗಿ ಇದೇ ವಿಷಯದ ಕುರಿತು ಕಾರ್ಯಶಿಬಿರವೂ ಇತ್ತು.

ಕಾರ್ಯಕ್ರಮದಲ್ಲಿ ಫೆಮಿಯ ಅಧ್ಯಕ್ಷರಾದ ಜನಾಬ್ ಇಕ್ಬಾಲ್ ಅಹ್ಮದ್, ಪ್ರಾಧ್ಯಾಪಕರಾದ ಪ್ರೊ.ಶೇಖ್ ಹಾರೂನ್ ಸಫ್ದರ್, ಹಾರೂನ್ ಬಾಷಾ ಉಪಸ್ಥಿತರಿದ್ದರು. ಮುಹಮ್ಮದ್ ನವಾಝ್ ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version