Home ಟಾಪ್ ಸುದ್ದಿಗಳು ಇನ್ನೂ ಪತ್ತೆಯಾಗದ ಸಚಿವ: ನೂತನ ವಿದೇಶಾಂಗ ಸಚಿವರನ್ನು ನೇಮಿಸಿದ ಚೀನಾ!

ಇನ್ನೂ ಪತ್ತೆಯಾಗದ ಸಚಿವ: ನೂತನ ವಿದೇಶಾಂಗ ಸಚಿವರನ್ನು ನೇಮಿಸಿದ ಚೀನಾ!

ಬೀಜಿಂಗ್‌: ಕಳೆದೊಂದು ತಿಂಗಳಿಂದ ನಾಪತ್ತೆಯಾಗಿರುವ ಚೀನೀ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಅವರನ್ನು ತಮ್ಮ ಸಚಿವ ಸ್ಥಾನದಿಂದ ವಜಾ ಮಾಡಿರುವ ಚೀನೀ ಸರ್ಕಾರ ವಾಂಗ್‌ ಯೀ ಅವರನ್ನು ನೂತನ ವಿದೇಶಾಂಗ ಸಚಿವರನ್ನಾಗಿ ನೇಮಿಸಿದೆ.

ಕಳೆದ ಡಿಸೆಂಬರ್‌ನಲ್ಲಷ್ಟೇ ಚೀನಾದ ವಿದೇಶಾಂಗ ಸಚಿವರಾಗಿ ಆಯ್ಕೆಯಾಗಿದ್ದ ಕ್ವಿನ್‌ ಗಾಂಗ್‌ ಅವರು ಜೂನ್‌ 25 ರಂದು ಬೀಜಿಂಗ್‌ನಲ್ಲಿ ನಡೆದ ರಾಯಭಾರಿಗಳ ಭೇಟಿಯ ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.

ಜೂನ್‌ 25 ರ ಬಳಿಕ ಇಂಡೋನೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಶೃಂಗಸಭೆಯಲ್ಲೂ ಭಾಗವಹಿಸಿರಲಿಲ್ಲ. ಹೀಗಾಗಿ ಅವರು ನಾಪತ್ತೆಯಾಗಿದ್ದಾರೆ ಎಂದೇ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದ ಚೀನೀ ವಿದೇಶಾಂಗ ಸಚಿವಾಲಯ ಅನಾರೋಗ್ಯದ ಕಾರಣದಿಂದಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿತ್ತು. ಆದರೂ ಅವರ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಸಚಿವಾಲಯ ನೀಡದೇ ಇದ್ದದ್ದು ತೀವ್ರ ಸಂಶಯಕ್ಕೆ ಎಡೆಮಾಡಿತ್ತು.

ಮಹತ್ವದ ಬೆಳವಣಿಗೆಯೊಂದರಲ್ಲಿ ಕ್ವಿನ್‌ ಅವರ ಉತ್ತರಾಧಿಕಾರಿಯಾಗಿರುವ 69 ವರ್ಷ ವಯಸ್ಸಿನ ವಾಂಗ್‌ ಅವರನ್ನು ಚೀನೀ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಗಿದೆ. 2018 ರಿಂದ 2022 ರ ವರೆಗೆ ಅವರು ಇದೇ ಹುದ್ದೆಯಲ್ಲಿದ್ದರು.

Join Whatsapp
Exit mobile version