ಇಟಾನಗರ್; ಚೀನಾ ಸೇನೆಯಿಂದ ಅಪಹರಣಕ್ಕೊಳಗಾಗಿ ಬಳಿಕ ಬಿಡುಗಡೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನಿಗೆ ಚೀನಾ ಸೈನಿಕರು ವಿದ್ಯುತ್ ಶಾಕ್ ನೀಡಿ ಚಿತ್ರೆಹಿಂಸೆ ನೀಡಿದ್ದಾರೆ ಎಂದು ಯುವಕನ ತಂದೆ ಗಂಭೀರ ಆರೋಪ ಮಾಡಿದ್ದಾರೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ [ PLA ] ಸೈನಿಕರು ತನ್ನ ಮಗನ ಕಣ್ಣಿಗೆ ಬಟ್ಟೆ ಕಟ್ಟಿ, ಕೈಗಳನ್ನು ಹಿಂದಕ್ಕೆ ಕಟ್ಟಿ, ಗಂಭೀರವಾಗಿ ಹಲ್ಲೆ ನಡೆಸುವುದರ ಜೊತೆಗೆ ವಿದ್ಯುತ್ ಶಾಕ್ ನೀಡಿದ್ದಾರೆ. ಊಟ ಮಾಡಲು ಮಾತ್ರ ಆತನ ಕೈಗಳನ್ನು ಸ್ವತಂತ್ರಗೊಳಿಸಿದ್ದರು. ಈ ಘಟನೆಯ ಬಳಿಕ ಆತ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ ಎಂದು ಯುವಕನ ತಂದೆ ಒಪಾಂಗ್ ತರೋನ್ ಹೇಳಿದ್ದಾರೆ.
ಅಪ್ಪರ್ ಸಿಯಾಂಗ್ ಜಿಲ್ಲೆಯ ಜಿಡೊ ಗ್ರಾಮದ ನಿವಾಸಿಯಾಗಿರುವ ಮಿರಾಮ್ ತರೊನ್‌ನನ್ನು ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ ಬಳಿಯ ಲುಂಗ್ಟಾ ಜೋರ್ ಪ್ರದೇಶಕ್ಕೆ ಜನವರಿ 18ರಂದು ಚಾರಣಕ್ಕೆ ತೆರಳಿದ್ದ ವೇಳೆ ಚೀನಾ ಪಡೆ ಅಪಹರಿಸಿತ್ತು.
ತರೊನ್ ಬಿಡುಗಡೆಗಾಗಿ ಭಾರತೀಯ ಸೇನೆ ಗಣರಾಜ್ಯೋತ್ಸವ ದಿನದಂದು ಚೀನಾ ಪಿಎಲ್‌ಎ ಜತೆಗೆ ಹಾಟ್‌ಲೈನ್ ಸಂಪರ್ಕ ನಡೆಸಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಚೀನಾ, ಜನವರಿ 27 ರಂದು ಅಂಜಾವ್ ಜಿಲ್ಲೆಯ ಕಿಬಿತು ಎಂಬಲ್ಲಿನ ವಾಚಾ-ದಮೈ ಸ್ಥಳದಲ್ಲಿ ಚೀನಾ ಸೇನೆ ಯುವಕನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತ್ತು.