ಹೊಸದೆಹಲಿ : ಚೀನವು ಭಾರತದ ಅತೀ ದೊಡ್ಡ ಭದ್ರತಾ ಅಪಾಯವಾಗಿ ಮಾರ್ಪಾಡಾಗಿದೆ. ಹೀಗಾಗಿ ಚೀನವು ಭಾರತದ ನಂ.1 ಶತ್ರು ಆಗಿದೆಯೇ ಹೊರತು ಪಾಕಿಸ್ಥಾನವಲ್ಲ ಎಂದು ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಕಳೆದ ವರ್ಷ ಹಿಮಾಲಯದ ಗಡಿಯ ರಕ್ಷಣೆಗೆಂದು ನೇಮಿಸಲಾದ ಸಾವಿರಾರು ಯೋಧರ ಪಡೆಗಳು ಹಾಗೂ ಶಸ್ತ್ರಾಸ್ತ್ರಗಳು ಇನ್ನೂ ಸುದೀರ್ಘ ಅವಧಿಗೆ ವಾಪಸ್ ಹಿಂದಿರುಗಳುಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಎರಡು ಅಣ್ವಸ್ತ್ರ ಸಜ್ಜಿತ ದೇಶಗಳ ನಡುವಿನ ಗಡಿ ವಿವಾದವನ್ನು ಬಗೆ ಹರಿಸಲು ಅಡ್ಡ ಬರುತ್ತಿರುವುದು “ವಿಶ್ವಾಸದ ಕೊರತೆ’ ಮತ್ತು “ಹೆಚ್ಚುತ್ತಿರುವ ಸಂದೇಹ’ವೇ ಆಗಿದೆ ಎಂದೂ ರಾವತ್ ಹೇಳಿದ್ದಾರೆ. ಕಳೆದ ತಿಂಗಳು ಭಾರತ ಮತ್ತು ಚೀನದ ಸೇನಾ ಕಮಾಂಡರ್‌ಗಳ ನಡುವೆ 13ನೇ ಸುತ್ತಿನ ಮಾತುಕತೆ ನಡೆದಿತ್ತು. ಆದರೂ ಗಡಿಯಿಂದ ಸೇನೆಯ ಹಿಂಪಡೆತ ವಿಚಾರದಲ್ಲಿ ಆ ಮಾತುಕತೆಗಳು ವಿಫಲವಾಗಿತ್ತು.
ಆದರೆ, ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿನ ಚೀನದ ಭೂಭಾಗದಲ್ಲಿ ಅಲ್ಲಿನ ಸೇನೆ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ. ಆ ಗ್ರಾಮಗಳಲ್ಲಿ ತನ್ನ ನಾಗರಿಕರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವುದು ಅಥವಾ ಎಲ್‌ಎಸಿಯುದ್ದಕ್ಕೂ ಭವಿಷ್ಯದಲ್ಲಿ ತನ್ನ ಸೇನೆಯನ್ನು ನಿಯೋಜಿಸುವುದು ಚೀನದ ತಂತ್ರವಾಗಿರಬಹುದು. ಆದರೆ ಗಡಿ ಪ್ರದೇಶದಲ್ಲಿ ಮತ್ತು ಸಮುದ್ರದಲ್ಲಿ ಚೀನದ ಯಾವುದೇ ದುಸ್ಸಾಹಸವನ್ನು ಎದುರಿಸಲೂ ಭಾರತ ಸಿದ್ಧವಾಗಿದೆ ಎಂದು ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.