Home ಟಾಪ್ ಸುದ್ದಿಗಳು ಪ್ರಥಮ ಪಿಯುಸಿ ಪರೀಕ್ಷೆ ನಡೆಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದ ಸುಪ್ರೀಮ್ ಕೋರ್ಟ್

ಪ್ರಥಮ ಪಿಯುಸಿ ಪರೀಕ್ಷೆ ನಡೆಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದ ಸುಪ್ರೀಮ್ ಕೋರ್ಟ್

ನವದೆಹಲಿ: ಸೆಪ್ಟೆಂಬರ್ 6 ರಿಂದ ಒಂದು ವಾರಗಳ ಕಾಲ ಪ್ರಥಮ ಪಿಯುಸಿ ಗೆ ಪರೀಕ್ಷೆ ನಡೆಸಲು ತೀರ್ಮಾನಿಸಿದ ಕೇರಳ ಸರ್ಕಾರದ ನಿರ್ಧಾರವನ್ನು ಭಾರತೀಯ ಸುಪ್ರೀಮ್ ಕೋರ್ಟ್ ಇಂದು ತಡೆಹಿಡಿದಿದೆ. ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರಕ್ಕೆ ತಡೆ ನೀಡಿದೆ.

ಕೇರಳವು ದೇಶದ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯವನ್ನು ಹೊಂದಿದೆ. ಆದರೆ ಕೋವಿಡ್ ಪ್ರಕರಣವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲವೆಂದು ತಿಳಿಸಿದ ಸುಪ್ರೀಮ್ ಕೋರ್ಟ್ ಪೀಠ, ಎಳೆ ವಯಸ್ಸಿನ ಮಕ್ಕಳನ್ನು ಅಪಾಯಕ್ಕೆ ಒಡ್ಡಲು ಸಾಧ್ಯವಿಲ್ಲವೆಂದು ತಿಳಿಸಿದೆ. ಆತಂಕಕಾರಿ ಪರಿಸ್ಥಿತಿಗೆ ತಲುಪಿರುವ ಕೇರಳದಲ್ಲಿ ಪ್ರಸಕ್ತ ದೇಶದ ಶೇಕಡ 70 ಕ್ಕಿಂತಲೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸರಿಸುಮಾರು 35,000 ದೈನಂದಿನ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಳೆಯ ವಯಸ್ಸಿನ ಮಕ್ಕಳನ್ನು ಅಪಾಯಕ್ಕೆ ತಳ್ಳುವುದು ಸಮಂಜಸವಲ್ಲ ಎಂದು ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ಪೀಠ ತಿಳಿಸಿದೆ.

ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಲ್ಲಿ ಒಟ್ಟಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದರಿಂದ ಕೋವಿಡ್ ಹರಡುವಿಕೆಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿ ಸಿ.ಟಿ ರವಿಕುಮಾರ್ ಅವರು ತನ್ನ ಆದೇಶದಲ್ಲಿ ಉಲ್ಲೇಖಿಸಿದರು. ಕೇರಳ ಹೈಯರ್ ಸೆಕೆಂಡರಿ ಶಿಕ್ಷಣ ನಿರ್ದೇಶನಾಲಯ ಸೆಪ್ಟೆಂಬರ್ 6 ರಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಿಗದಿಪಡಿಸಿತ್ತು. ಕೇರಳದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರ, ಮಾನವಶಾಸ್ತ್ರ, ಎಲೆಕ್ಟ್ರಾನಿಕ್ ಸರ್ವೀಸ್ ಟೆಕ್ನಾಲಜಿ, ಗೃಹ ವಿಜ್ಞಾನ, ಗಾಂಧಿ ಅಧ್ಯಯನ, ತತ್ವಶಾಸ್ತ್ರ, ಪತ್ರಿಕೋದ್ಯಮ, ಕಂಪ್ಯೂಟರ್ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ ಗಳಿಗೆ ಸೆಪ್ಟೆಂಬರ್ 6 ರಿಂದ 16 ರವರೆಗೆ ಪರೀಕ್ಷೆಗಳನ್ನು ನಿಗದಿಪಡಿಸಿತ್ತು.

Join Whatsapp
Exit mobile version