ತಿರುವನಂತಪುರಂ: ಪತಿಯ ಒತ್ತಾಯದಿಂದ ಅಕ್ಯುಪಂಕ್ಚರ್ ಚಿಕಿತ್ಸೆ(ಸೂಜಿ ಚಿಕಿತ್ಸೆ) ಮೂಲಕ ಮನೆಯಲ್ಲಿಯೇ ಹೆರಿಗೆ ನಡೆದು ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
ಕರಕ್ಕಮಂಡಪಂನ ಶಮೀರಾ (36) ಮೃತ ಮಹಿಳೆ. ಮೂರು ಮಕ್ಕಳ ತಾಯಿ ಆಗಿದ್ದ ಶಮೀರಾ, ನಾಲ್ಕನೇ ಬಾರಿ ಗರ್ಭಿಣಿಯಾಗಿದ್ದರು. ಹೆರಿಗೆಗಾಗಿ ಆಸ್ಪತ್ರೆಗೆ ತೆರಳದಂತೆ ಪತಿ ನಯಾಸ್ ತಡೆದಿದ್ದು, ಮನೆಯಲ್ಲಿಯೇ ಮಹಿಳೆಯೊಬ್ಬರ ಸಹಾಯದಿಂದ ಅಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾನೆ. ಹೆಂಡತಿ, ಮಗುವಿನ ಕಾರಣವಾದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಮೀರಾ ಅವರನ್ನು ಗರ್ಭಾವಸ್ಥೆ ಸಮಯದಲ್ಲೂ ಸರಿಯಾಗಿ ಆಕೆಯ ಪತಿ ನಯಾಸ್ ನೋಡಿಕೊಂಡಿಲ್ಲ. ಔಷಧಗಳನ್ನು ತೆಗೆದುಕೊಳ್ಳದಂತೆ ಸೂಚಿಸಿದ್ದ. ಆಸ್ಪತ್ರೆಗೆ ಹೋಗದಂತೆಯೂ ಬೆದರಿಕೆ ಹಾಕಿದ್ದ ಎಂದು ಆಕೆಯ ಪೋಷಕರು ಪ್ರತಿಕ್ರಿಯಿಸಿದ್ದಾರೆ.
ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವೆ ವೀಣಾ ಜಾರ್ಜ್, ಆರೋಪಿ ಪತಿ ನಯಾಸ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ತಾಯಿ ಹಾಗೂ ಶಿಶು ಸಾವಿಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯನ್ನು ನರ ಹತ್ಯೆ ಎಂದೇ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.