ಚಿಕ್ಕಮಗಳೂರು: ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ.
ವಿನೋದ್(24) ಮೃತರು.
ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಬಿಟ್ಟು ಹೋದಳೆಂದು ಮನನೊಂದ ವಿನೋದ್ ಮನೆಯಲ್ಲಿ ಯಾರು ಇಲ್ಲದ ವೇಳೆ ಸಮಯ ನೋಡಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ತೇಗೂರು ಗ್ರಾಮದ ತನುಜಾ ಎಂಬ ಯುವತಿ ಹಾಗೂ ವಿನೋದ್ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಡಿಸೆಂಬರ್ 10 ರಂದು ವಿನೋದ್ ಹಾಗೂ ತನುಜಾ ಮದುವೆಯಾಗಿದ್ದರು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ನವ ಜೋಡಿಯನ್ನು ಠಾಣೆಗೆ ಕರೆ ತಂದಿದ್ದರು. ಠಾಣೆಯಲ್ಲಿ ಪಂಚಾಯಿತಿ ನಡೆದಿದ್ದು ಯುವತಿ ತನ್ನ ತಾಯಿ ಮನೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಾಳೆ. ಮದುವೆಯಾದ ಮೂರೇ ದಿನಕ್ಕೆ ಗಂಡನನ್ನು ಬಿಟ್ಟು ತಾಯಿ ಜೊತೆ ಹೋಗುವುದಾಗಿ ಹೇಳಿ ಯುವತಿ ಉಲ್ಟಾ ಹೊಡೆದಿದ್ದಾಳೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.