Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮತ್ತೊಂದು ಬಲಿ

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮತ್ತೊಂದು ಬಲಿ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಚಿಕ್ಕಮಗಳೂರು ತಾಲೂಕು ಆಲ್ದೂರು ಸಮೀಪದ ಕಂಚಿನಕಲ್ ದಯರ್ಗದ ಬಳಿ ಕೂಲಿ ಕಾರ್ಮಿಕರೊಬ್ಬರನ್ನು ಕಾಡಾನೆ ತುಳಿದು ಸಾಯಿಸಿದೆ.

ಕೂಲಿ ಕಾರ್ಮಿಕ ಆನಂದ ಪೂಜಾರಿ(55 ವರ್ಷ) ಮೃತಪಟ್ಟವರು. ಇಂದು ಮುಂಜಾನೆ ಆನಂದ ಪೂಜಾರಿ ಅವರು ತೋಟದ ಕೆಲಸಕ್ಕೆ ತೆರಳುತ್ತಿದ್ದರು. ಆಗ ಕಾಡಾನೆ ದಾಳಿ ನಡೆಸಿದೆ‌. ಕಾಡಾನೆಯ ಭೀಕರ ದಾಳಿಯಿಂದ ಆನಂದ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನೂರ್ ಅಹಮ್ಮದ್ ಎಂಬುವರಿಗೆ ಸೇರಿದ ಕೆಸುವಿನಕಲ್ ಎಸ್ಟೇಟ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ಆನಂದ ಪೂಜಾರಿ ಹಲವು ವರ್ಷಗಳಿಂದ ಈ ಎಸ್ಟೇಟ್‌ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ತಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

ಇತ್ತೀಚೆಗೆ ಕೆಲ ತಿಂಗಳ ಹಿಂದೆ ಆಲ್ದೂರು ಭಾಗದಲ್ಲಿ ಇಬ್ಬರನ್ನು ಕಾಡಾನೆ ತುಳಿದು ಸಾಯಿಸಿತ್ತು. ಮಲೆನಾಡಿನಲ್ಲಿ ನಿರಂತರವಾಗಿ ಕಾಡಾನೆ ದಾಳಿ ಆಗುತ್ತಿದ್ದರು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.

Join Whatsapp
Exit mobile version