ಜಮೀನಿನಲ್ಲಿದ್ದ ರೈತನ ಮೇಲೆ ಲಾರಿ ಹರಿಸಿ ಹತ್ಯೆ; ಸ್ವಾಭಾವಿಕ ಅಪಘಾತವೆಂದು ದೂರು ದಾಖಲಿಸಿಕೊಂಡ ಪೊಲೀಸರು

Prasthutha|

ಚಿಕ್ಕಬಳ್ಳಾಪುರ: ಇತ್ತೀಚಿಗೆ ಕಲಬುರಗಿಯಲ್ಲಿ ಅಕ್ರಮ ಮರಳು ದಂಧೆ ತೆಡೆಯಲು ಹೋಗಿದ್ದ ಹೆಡ್​​​ಕಾನ್​ಸ್ಟೇಬಲ್ ಮೇಲೆ ಟ್ಯಾಕ್ಟರ್ ಹರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಈ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಗುಮ್ಮಲಾಪುರ ಗ್ರಾನೈಟ್ ಕ್ವಾರಿ ಬಳಿಯ ಜಮೀನಿನಲ್ಲಿ ರೈತನ ಮೇಲೆ ಲಾರಿ ಹರಿಸಿ ಹತ್ಯೆಗೈದ ಆರೋಪ ಕೇಳಿಬಂದಿದೆ. ಅಡ್ಡಗಲ್ಲ ಗ್ರಾಮದ ರಾಘವೇಂದ್ರ (35) ಮೃತ ರೈತ. ಜಮೀನಿನಲ್ಲಿ ಗ್ರಾನೈಟ್ ಲಾರಿ ಓಡಿಸದಂತೆ ತಡೆದಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

- Advertisement -

ಗುಮ್ಮಲಾಪುರ ಗ್ರಾನೈಟ್ ಕ್ವಾರಿ ಬಳಿಯ ಜಮೀನುಗಳಲ್ಲಿ ಲಾರಿಗಳ ಸಂಚಾರ ಮಿತಿ ಮೀರಿತ್ತು. ಹೀಗಾಗಿ ಜೂ.18ರಂದು ಜಮೀನಿನಲ್ಲಿ ಸಂಚರಿಸುತ್ತಿದ್ದ ಲಾರಿಗಳನ್ನು ರಾಘವೇಂದ್ರ ತಡೆದಿದ್ದರು. ಹೀಗಾಗಿ  ಸಂಜೆ ಜಮೀನಿನಲ್ಲಿದ್ದ ರಾಘವೇಂದ್ರ ಅವರ ಮೇಲೆ ಹರಿ ಹರಿಸಲಾಗಿತ್ತು.

ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ಸಾವನ್ನಪ್ಪಿದ್ದಾರೆ. ಮೃತ ರಾಘವೇಂದ್ರನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

ಗ್ರಾನೈಟ್ ಮಾಫಿಯಾ ಜೊತೆ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮತ್ತು ಆರ್.ಟಿ.ಒ ಸೇರಿದಂತೆ ಚಿಕ್ಕಬಳ್ಳಾಫುರ ಜಿಲ್ಲಾಡಳಿತದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಪೊಲೀಸರು ಐಪಿಸಿ ಸೆಕ್ಷನ್ 338 ರ ಅಡಿ ಸ್ವಾಭಾವಿಕ ಅಪಘಾತವೆಂದು ಎಫ್​ಐಆರ್​ ದಾಖಲಿಸಿದ್ದಾರೆ. ಮೃತ ರಾಘವೇಂದ್ರನ ತಂದೆ ಬೈಯಣ್ಣನಿಂದ ಸ್ವಾಭಾವಿಕ ಅಪಘಾತವೆಂದು ದೂರು ಬರೆಸಿಕೊಂಡ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆ. ಪೆರೇಸಂದ್ರ ಠಾಣೆ ಪೊಲೀಸರು ಆರೋಪಿ ಕ್ವಾರಿ ಮಾಲಿಕರ ಜೊತೆ ಶಾಮೀಲು ಆಗಿದ್ದಾರೆ ಎಂಬ ಆರೋಪವಿದೆ.