ನವದೆಹಲಿ: ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರ (ಸಿಡಿಎಸ್ )ನೇಮಕವನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರ ಹುದ್ದೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯ ಸ್ಥಾಪನೆಯೊಂದಿಗೆ ನಾಗರಿಕ-ಮಿಲಿಟರಿ ಜಂಟಿಯ ಪೂರ್ಣ ಪ್ರಮಾಣದ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ ಎಂದುಹೇಳಿದರು.
2021 ರ ಡಿಸೆಂಬರ್ ನಲ್ಲಿ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಆರು ತಿಂಗಳ ನಂತರ, ಈಗ ಸರ್ಕಾರವು ಸಶಸ್ತ್ರ ಪಡೆಗಳ ಸೇವಾ ನಿಯಮಗಳನ್ನು ತಿದ್ದುಪಡಿ ಮಾಡಿದೆ. 62 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಸೇವೆ ಸಲ್ಲಿಸುತ್ತಿರುವ ಮತ್ತು ಇತ್ತೀಚೆಗೆ ನಿವೃತ್ತರಾದ ತ್ರಿ-ಸ್ಟಾರ್ ಅಧಿಕಾರಿಗಳಾದ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಮತ್ತು ವೈಸ್ ಅಡ್ಮಿರಲ್ – ಸಿಡಿಎಸ್ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ಸರ್ಕಾರ ಹೊರಡಿಸಿದ ಅಧಿಸೂಚನೆಗಳಲ್ಲಿ ತಿಳಿಸಲಾಗಿದೆ.