ಚೆನ್ನೈ: ವಿರೋಧ ಪಕ್ಷಗಳನ್ನು ಒಂದೇ ಸೂರಿನಡಿಯಲ್ಲಿ ತರಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಜ್ಜಾಗಿದ್ದಾರೆ. ಏಪ್ರಿಲ್ 2 ರಂದು ಡಿಎಂಕೆಯ ದೆಹಲಿ ಕಚೇರಿಯ ಉದ್ಘಾಟನೆ ಸಮಾರಂಭವು ವಿರೋಧ ಪಕ್ಷಗಳ ಸಭೆಗೆ ವೇದಿಕೆಯಾಗಲಿದೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಸಂದೀಪ್ ಗಾಂಧಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಎಡ ಪಕ್ಷಗಳ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಐಕ್ಯತೆಯ ಬೇಡಿಕೆ ತೀವ್ರಗೊಂಡಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಲು ವಿರೋಧ ಪಕ್ಷಗಳು ನಡೆಗಳನ್ನು ಪ್ರಾರಂಭಿಸಿದ್ದು, ಮಮತಾ ಸೇರಿದಂತೆ ನಾಯಕರು ಮೈತ್ರಿಕೂಟಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸ್ಟಾಲಿನ್ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಬಿಹಾರ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಉಪಸ್ಥಿತರಿದ್ದರು. ಈ ವೆಳೆ ಮಾತನಾಡಿದ ಡಿಎಂಕೆ ನಾಯಕಿ ಕನಿಮೋಳಿ ಎಂಪಿ ‘ಇದು ಟ್ರೈಲರ್ ಮಾತ್ರ,ಮತ್ತು ಸಿನಿಮಾ ಇನ್ನು ಬರಬೇಕಷ್ಟೇ’ ಎಂದು ಹೇಳಿದರು.