ಬ್ರಾಹ್ಮಣರ ವಿರುದ್ಧ ಹೇಳಿಕೆ : ಛತ್ತೀಸ್ ಗಡ ಮುಖ್ಯಮಂತ್ರಿಯ ತಂದೆಯ ಬಂಧನ

Prasthutha|

ನವದೆಹಲಿ: ಬ್ರಾಹ್ಮಣ ಸಮುದಾಯಕ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಛತ್ತೀಸ್ ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದಕುಮಾರ್ ಬಘೇಲ್ ಅವರನ್ನು ಬಂಧಿಸಿ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -

ತನ್ನ ತಂದೆಯ ಮೇಲಿನ ಆರೋಪದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ತಮ್ಮ ಸರ್ಕಾರವು ಕಾನೂನಿನ ಮೇಲಾಗಿ ಯಾರನ್ನೂ ಪರಿಗಣಿಸುವುದಿಲ್ಲವೆಂದು ತಿಳಿಸಿದರು.

ಮುಖ್ಯಮಂತ್ರಿಯ ತಂದೆಯಾದರೂ ಕಾನೂನನ್ನು ಮೀರಲು ಯಾರಿಗೂ ಅವಕಾಶ ನೀಡುವುದಿಲ್ಲ. ಮುಖ್ಯಮಂತ್ರಿಯಾಗಿ ವಿವಿಧ ಸಮುದಾಯಗಳ ನಡುವೆ ಸಾಮರಸ್ಯವನ್ನು ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ. ಈ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಭೂಪೇಶ್ ಬಘೇಲ್ ಅವರು ಸುದ್ದಿಗಾರರಿಗೆ ತಿಳಿಸಿದರು.

- Advertisement -

ನನ್ನ ತಂದೆಯೊಂದಿಗಿನ ನನ್ನ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದು ಹೊಸತಲ್ಲ. ನಮ್ಮ ರಾಜಕೀಯ ಆಲೋಚನೆಗಳು ಮತ್ತು ಚಿಂತನೆಗಳು ವಿಭಿನ್ನವಾಗಿವೆ. ನಾನು ಮಗನೆಂಬ ನೆಲೆಯಲ್ಲಿ ಅವರನ್ನು ಗೌರವಿಸುತ್ತೇನೆ. ಆದರೆ ಮುಖ್ಯಮಂತ್ರಿಯಾಗಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಇಂತಹ ಪ್ರಯತ್ನವನ್ನು ನಾನು ಕ್ಷಮಿಸಲು ಸಾಧ್ಯವಿಲ್ಲವೆಂದು ತಿಳಿಸಿದರು. ಛತ್ತೀಸ್ ಗಡ ಸರ್ಕಾರ ಪ್ರತಿಯೊಂದು ಧರ್ಮ, ಜಾತಿ, ಸಮುದಾಯಗಳ ಭಾವನೆಯನ್ನು ಗೌರವಿಸುತ್ತದೆ ಮತ್ತು ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಬಘೇಲ್ ಒತ್ತಿ ಹೇಳಿದರು.

ಬಘೇಲ್ ಅವರ ತಂದೆ ಇತ್ತೀಚೆಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿದಾಗ ಬ್ರಾಹ್ಮಣರನ್ನು ಬಹಿಷ್ಕರಿಸುವಂತೆ ವಿವಾದಾತ್ಮಕವಾಗಿ ಕರೆ ನೀಡಿದ್ದರು ಮತ್ತು ಅವರನ್ನು ವಿದೇಶಿಯರು ಎಂದು ಜರಿದ ಅವರು ಜನರು ಬ್ರಾಹ್ಮಣರ ಕಾರಣಕ್ಕಾಗಿ ಹಳ್ಳಿ ಬಿಡದಂತೆ ಒತ್ತಾಯಿಸಿದ್ದರು.

ಶನಿವಾರ ರಾತ್ರಿ ಬಘೇಲ್ ಅವರ ತಂದೆ ವಿರುದ್ಧ ಸರ್ವ ಬ್ರಾಹ್ಮಣ ಸಮಾಜ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ರಾಯಪುರದಲ್ಲಿ ಎಫ್.ಐ.ಆರ್ ದಾಖಲಿಸಲಾಗಿತ್ತು.



Join Whatsapp