Home ಟಾಪ್ ಸುದ್ದಿಗಳು ನೌಕರರ ಕ್ರಿಮಿನಲ್ ಹಿನ್ನೆಲೆ ಪರಿಶೀಲಿಸಿ: ಡೆಲಿವರಿ ಕಂಪನಿಗಳಿಗೆ ಪೊಲೀಸ್ ಆಯುಕ್ತರ ಸೂಚನೆ 

ನೌಕರರ ಕ್ರಿಮಿನಲ್ ಹಿನ್ನೆಲೆ ಪರಿಶೀಲಿಸಿ: ಡೆಲಿವರಿ ಕಂಪನಿಗಳಿಗೆ ಪೊಲೀಸ್ ಆಯುಕ್ತರ ಸೂಚನೆ 

ಬೆಂಗಳೂರು: ನಿಷೇಧಿತ ವಸ್ತುಗಳನ್ನು ಸರಬರಾಜು ಮಾಡದೇ, ಅಪರಾಧ ಹಿನ್ನೆಲೆಯನ್ನು ಪರಿಶೀಲನೆ ನಡೆಸದೇ, ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ನಿಗಾ ವಹಿಸದೇ ಯಾವುದೇ ವಸ್ತುಗಳನ್ನು ಮನೆಗೆ ತಲುಪಿಸಲು ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಡೆಲಿವರಿ ಕಂಪನಿಗಳು ಏಜೆನ್ಸಿಗಳ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮನೆಗಳಿಗೆ ಗೃಹೋಪಯೋಗಿ ವಸ್ತುಗಳು ಆಹಾರ ಊಟ ಸರಬರಾಜು ಮಾಡುವ ಕಂಪನಿಗಳ ಡಿಲವರಿ ಬಾಯ್ ಗಳಿಂದ ಲೈಂಗಿಕ ಕಿರುಕುಳ ಡ್ರಗ್ಸ್ ಸಾಗಣೆ ಇನ್ನಿತರ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಓಲಾ, ಊಬರ್, ರಾಪಿಡೋ ಸೇರಿ ಡೆಲಿವರಿ ಕಂಪನಿಗಳು ಏಜೆನ್ಸಿಗಳ ಪದಾಧಿಕಾರಿಗಳ  ಸಮನ್ವಯ ಸಭೆ ನಡೆಸಿದ ಕಮೀಷನರ್ ಕಠಿಣ ನಿಯಮಗಳ ಪಾಲನೆಗೆ ಸೂಚನೆ ನೀಡಿದ್ದಾರೆ.

ಕಂಪನಿಗಳು ಏಜೆನ್ಸಿಗಳಲ್ಲಿ ಕೆಲಸ ಮಾಡುವ ನೌಕರರ ಕ್ರಿಮಿನಲ್ ಹಿನ್ನೆಲೆಯನ್ನು ಅವರ ಗುರುತಿನ ಬಗ್ಗೆ ಕನಿಷ್ಠ ಎರಡು ದಾಖಲಾತಿಗಳನ್ನು ಹಾಗೂ ಅವರು ಉಪಯೋಗಿಸುವ ವಾಹನಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ ನಂತರವೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದರು.

ಮನೆಗಳಿಗೆ ಗೃಹೋಪಯೋಗಿ ವಸ್ತುಗಳು ಆಹಾರ ಊಟ ಸರಬರಾಜು ಮಾಡುವ ಕಂಪನಿಗಳ ಡಿಲವರಿ ಬಾಯ್ ಗಳಿಂದ ಲೈಂಗಿಕ ಕಿರುಕುಳ ಡ್ರಗ್ಸ್ ಸೇರಿ ನಿಷೇಧಿತ ವಸ್ತುಗಳ ಸಾಗಣೆ ಇನ್ನಿತರ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲು ಸೂಚನೆ ನೀಡಿದರು.

ಹೊಸದಾಗಿ ನೇಮಕ ಮಾಡಿಕೊಳ್ಳುವ ನೌಕರರ ಕ್ರಿಮಿನಲ್ ಹಿನ್ನೆಲೆಗಳ ಪೂರ್ವಾಪರ ಪರಿಶೀಲನೆ ನಡೆಸಲು ಸೇವಾ ಸಿಂಧೂ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಲು ಸಲಹೆ ನೀಡಿದರು.

ಟ್ಯಾಕ್ಸಿ ಬುಕ್ ಮಾಡಿರುವ ಗ್ರಾಹಕರು, ಪ್ರಯಾಣ ಪ್ರಾರಂಭಿಸಿದ ಬಳಿಕ ನಿಗದಿತ ಸ್ಥಳಕ್ಕೆ ನಿರ್ದಿಷ್ಟ ಸಮಯಕ್ಕೆ ತಲುಪಿದ್ದಾರೆಯೇ / ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳಬೇಕು. ಗ್ರಾಹಕರು ಬುಕ್ ಮಾಡಿದ ಸ್ವತ್ತುಗಳು ನಿಗದಿತ ಸಮಯಕ್ಕೆ ಅವರ ಸ್ಥಳಕ್ಕೆ ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತಾಂತ್ರಿಕ ಸೌಲಭ್ಯಗಳ ವ್ಯವಸ್ಥೆಗಳನ್ನು  ಅಳವಡಿಸಿಕೊಳ್ಳುವುದು ಮುಖ್ಯ ಎಂದರು.

ಸಂಸ್ಥೆಯ ಸಾಫ್ಟ್’ವೇರ್ ಅಪ್ಲಿಕೇಷನ್’ಗಳಲ್ಲಿ ಹಾಗೂ ವಾಹನಗಳಲ್ಲಿ ಸೆಫ್ಟಿ ಸ್ಟಿಕರ್ 112 ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಥೆಯ ಸಮವಸ್ತ್ರಗಳು ದುರುಪಯೋಗವಾಗದಂತೆ, ನೌಕರರು ಕೆಲಸ ಬಿಟ್ಟಾಗ ಅವರಿಗೆ ನೀಡಲಾಗಿದ್ದ ಸಂಸ್ಥೆಯ ಗುರುತಿನ ಪತ್ರ ಇನ್ನಿತರ  ವಸ್ತುಗಳನ್ನು ವಾಪಸ್ಸು ಪಡೆಯುವುದು ಕಡ್ಡಾಯ ಎಂದರು.

ಡಂಝೋ, ಪೋರ್ಟರ್, ಪ್ಲಿಪ್ ಕಾರ್ಟ್ ಮುಂತಾದ ಡೆಲಿವರಿ ಫ್ಲಾಟ್ ಫಾರಂ ಗಳಲ್ಲಿ ನಿಷೇಧಿತ ವಸ್ತುಗಳನ್ನು ಸರಬರಾಜು ಮಾಡದಂತೆ ಎಚ್ಚರವಹಿಸಬೇಕು.

ಗ್ರಾಹಕರು ಬುಕ್ ಮಾಡಿರುವ ವಸ್ತುಗಳನ್ನು ಬುಕಿಂಗ್ ಮಾಡಿರುವ ಸ್ಥಳಗಳಲ್ಲಿ ಮಾತ್ರವೇ ಡೆಲಿವರಿ ಮಾಡತಕ್ಕದು. ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ವಸ್ತುಗಳನ್ನು ನೀಡದಂತೆ  ತಿಳುವಳಿಕೆ ನೀಡುವುದು. ಡೆಲಿವರಿ ವಾಹನಗಳ ಸವಾರರು ಬಹುತೇಕ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅವರ ಸುರಕ್ಷತೆ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸಂಚಾರ ನಿಯಮಗಳ ಪಾಲನೆ ಮಾಡುವಂತೆ ತಮ್ಮ ತಮ್ಮ ಸಂಸ್ಥೆಯ ನೌಕರರಿಗೆ ಜಾಗೃತಿ ಉಂಟು ಮಾಡಲು ಅಗತ್ಯವಿದ್ದಲ್ಲಿ ಉಚಿತವಾಗಿ ಸಂಚಾರ ಪೊಲೀಸ್ ವತಿಯಿಂದ ತರಬೇತಿ ಕಾರ್ಯಾಗಾರಗಳನ್ನು ನಡೆಸಲು ಸೂಚನೆ ನೀಡಿದರು.

ಪ್ರತಿಯೊಂದು ಸಂಸ್ಥೆಗಳಿಂದ ತುರ್ತು ಮಾಹಿತಿ ವಿನಿಮಯಕ್ಕಾಗಿ 24×7 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವುದು.

ತುರ್ತು ಸಂದರ್ಭಗಳಲ್ಲಿ ಗ್ರಾಹಕರು  ತಮ್ಮ ಸಮಸ್ಯೆಗಳ ಬಗ್ಗೆ ನೋಡಲ್ ಅಧಿಕಾರಿಯವರಿಗೆ ಕರೆ ಮಾಡಿ ತಿಳಿಸಿದಾಗ, ಅಂತಹ ದೂರುಗಳನ್ನು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ, ಅಗತ್ಯ ಕ್ರಮ ಕೈಗೊಳ್ಳಲು ಸಹಕರಿಸುವುದು.

ಸಾರ್ವಜನಿಕರ / ಗ್ರಾಹಕರ ಸಂಪರ್ಕಕ್ಕೆ ಬರುವ ನೌಕಕರಿಗೆ ನಿರಂತರವಾಗಿ ಸಂವೇದನ ಶೀಲತೆ ಬಗ್ಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸುವುದು.

ಡೆಲಿವರಿ ನೀಡಲು ಹೋಗುವ ನೌಕರರು ಕೆಲವೊಂದು ಸಂದರ್ಭಗಳಲ್ಲಿ ಸುಲಿಗೆ, ಹಲ್ಲೆಗೆ ಒಳಗಾಗಿರುವ ಪ್ರಕರಣಗಳು ವರದಿಯಾಗಿದ್ದು, ಅಂತಹ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾದ ಕಾನೂನು ಕ್ರಮಗಳನ್ನು ಜರುಗಿಸಿ, ಸಂಸ್ಥೆಯ ನೌಕರರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲಾಯಿತು.

ಸಭೆಯಲ್ಲಿ ವಿಶೇಷ ಪೊಲೀಸ್ ಆಯುಕ್ತ ಎಂ.ಎ.ಸಲೀಂ,ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜಂಟಿ ಪೊಲೀಸ್ ಆಯುಕ್ತರಾದ ಎಂ.ಎನ್ .ಅನುಚೇತ್,ಡಾ.ಎಸ್.ಡಿ.ಶರಣಪ್ಪ,ಓಲಾ, ಊಬರ್, ರ್ಯಾಪಿಡೋ, ಮುಂತಾದ ಟ್ಯಾಕ್ಸಿ ಅಗ್ರಿಗೇಟರ್ಸ್ ಹಾಗೂ ಅನ್ಲೈನ್ ಪುಡ್ ಡೆಲಿವರಿ, ಇನ್ನಿತರೆ ಸರಕು ಸಾಗಾಣಿಕೆ ಕಂಪನಿ,ಏಜೆನ್ಸಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Join Whatsapp
Exit mobile version