ನವದೆಹಲಿ, ಮೇ 22: ಈ ವರ್ಷದ ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಕಿಸಾನ್ (ರೈತ) ಟ್ರಾಕ್ಟರ್ ರಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಟ ದೀಪ್ ಸಿಧು ಮತ್ತು ಇತರ ಹದಿನೈದು ಜನರ ವಿರುದ್ಧ 3,224 ಪುಟಗಳ ದೋಷಾರೋಪಪಟ್ಟಿಯನ್ನು ತಿಸ್ ಹಜಾರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಜನವರಿ 26 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ರೈತರು ಟ್ರಾಕ್ಟರ್ ರಾಲಿ ನಡೆಸಿದ್ದರು. ಈ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆದು ಹಲವರು ಗಾಯಗೊಂಡಿದ್ದರು.
3,224 ಪುಟಗಳ ದೋಷಾರೋಪ ಪಟ್ಟಿಯಲ್ಲಿ 250 ಪುಟಗಳಲ್ಲಿ ‘ಪಿತೂರಿ’ಯನ್ನು ಹೇಗೆ ಕಾರ್ಯಗತಗೊಳಿಸಲಾಯಿತು ಎಂಬುದನ್ನು ವಿವರಿಸಲಾಗಿದೆ. ಈ ಪ್ರಕರಣದಲ್ಲಿ ದೀಪ್ ಸಿಧು ಮತ್ತು ಲಖಾ ಸಿದ್ಧನಾ ಅವರನ್ನು ಮುಖ್ಯ ಸಂಚುಕೋರರು ಎಂದು ಹೆಸರಿಸಲಾಗಿದೆ ಎಂದು ದೆಹಲಿ ಪೊಲೀಸರ ಮೂಲಗಳು ತಿಳಿಸಿವೆ. ಅನೇಕ ಪ್ರಮುಖ ರೈತ ಮುಖಂಡರ ಹೆಸರನ್ನು ಸಹ ಚಾರ್ಜ್ ಶೀಟಿನಲ್ಲಿ ಸೇರಿಸಲಾಗಿದೆ.
ಲಖಾ ಸಿದ್ಧಾನಾ ಸೇರಿದಂತೆ ಆರು ಆರೋಪಿಗಳು ಇನ್ನೂ ಪರಾರಿಯಾಗಿದ್ದಾರೆ. ಮನಿಂದರ್ ಸಿಂಗ್, ಖೇಂಪ್ರೀತ್ ಸಿಂಗ್ ಮತ್ತು ಜಬರ್ಜಾಂಗ್ ಸಿಂಗ್ ಎಂಬವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಶದ್ರೋಹ, ಗಲಭೆ, ಕೊಲೆ ಯತ್ನ ಮತ್ತು ದರೋಡೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಗಂಭೀರ ವಿಭಾಗಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಆರೋಪ ಹೊರಿಸಿದ್ದಾರೆ. ಪ್ರಕರಣದ ತನಿಖೆಯ ಸಮಯದಲ್ಲಿ ಹೆಚ್ಚುವರಿ ಸಾಕ್ಷ್ಯಗಳು ಕಂಡುಬಂದರೆ ಅವರು ಪೂರಕ ಚಾರ್ಜ್ಶೀಟ್ ಸಲ್ಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗಜೇಂದ್ರ ಸಿಂಗ್ ನಗರ ಮೇ 28 ರಂದು ಇದರ ವಿಚಾರಣೆ ನಡೆಸಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 48 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಸುಮಾರು 150 ಜನರನ್ನು ಬಂಧಿಸಲಾಗಿದೆ.