Home ಟಾಪ್ ಸುದ್ದಿಗಳು ಬೆಡ್ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಶಾಸಕನ ಆಪ್ತ ಸೇರಿ ಮೂವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಬೆಡ್ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಶಾಸಕನ ಆಪ್ತ ಸೇರಿ ಮೂವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಸೇರಿ ಇತರ ಆರೋಪಿಗಳ ವಿರುದ್ಧ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ 150 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಆರೋಪಿಗಳು ಕೋವಿಡ್ ಸೋಂಕಿತರಿಗೆ ಮೀಸಲಿಟ್ಟಿದ್ದ ಆಸ್ಪತ್ರೆಯ ಬೆಡ್ ಗಳನ್ನು ಬ್ಲಾಕ್ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಇನ್ಸ್​ಪೆಕ್ಟರ್ ಶ್ರೀಧರ್ ಪೂಜಾರ್ ಅವರು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು, ರೋಹಿತ್ ಮತ್ತು ನೇತ್ರಾವತಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಮೂವರು ಸೇರಿ ಹಣ ಪಡೆದು ಬೆಡ್ ಬ್ಲಾಕ್ ಮಾಡಿಸಿ ಕೊಟ್ಟಿದ್ದರು ಎಂಬುದು ದೃಢವಾಗಿದ್ದು, ಮೂವರು ರೋಗಿಗಳಿಂದ ಹಣ ಪಡೆದು ಬೆಡ್ ಕೊಡಿಸದ್ದಕ್ಕೆ ಸಾಕ್ಷಿ ಲಭ್ಯವಾಗಿದೆ.
ಗೂಗಲ್ ಪೇ, ಫೋನ್ ಪೇ ಮೂಲಕ ಹಣದ ವರ್ಗಾವಣೆ ನಡೆದಿದ್ದು, ರೋಗಿ ನಂಬರ್ 1 ರಿಂದ 8 ಸಾವಿರ ರೂ ರೋಗಿ ನಂ 2 ರಿಂದ 25 ಸಾವಿರ ರೂ ಹಾಗೂ ರೋಗಿ ನಂ 3 ರಿಂದ 20ಸಾವಿರ ರೂ ಹಣ ಪಡೆದಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.


ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಸಾಕ್ಷಿ ಸಹಿತ ಒಟ್ಟು 150 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಮತ್ತೊಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಜಯನಗರದಲ್ಲಿ ದಾಖಲಾಗಿದ್ದ ಸಂಪೂರ್ಣ ಬೆಡ್ ಬ್ಲಾಕ್ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಗರದ ಹಲವು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ನಡೆದಿರುವ ಅಕ್ರಮದ ತನಿಖೆ ಪ್ರಗತಿಯಲ್ಲಿದ್ದು, ಎರಡನೇ ಪ್ರಕರಣದಲ್ಲಿ ಇದುವರೆಗೆ ಎಂಟು ಮಂದಿಯನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.


ಬೆಡ್ ಬ್ಲಾಕಿಂಗ್ ಪ್ರಕರಣವನ್ನು ಹೊರಗೆಳೆಯುವ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಕೋವಿಡ್ ವಾರ್ ರೂಮ್ ಗೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಪೈಕಿ ಮುಸ್ಲಿಮ್ ಸಿಬ್ಬಂದಿಯ ಹೆಸರನ್ನು ಪ್ರಸ್ತಾಪಿಸಿ ಪ್ರಕರಣಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನಿಸಿ ಸಾರ್ಜನಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ತನಿಖೆಯ ವೇಳೆ ಬಿಜೆಪಿ ಕಾರ್ಯಕರ್ತರೇ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡಿದ್ದುದು ಬೆಳಕಿಗೆ ಬಂದಿತ್ತು.

Join Whatsapp
Exit mobile version