Home ಟಾಪ್ ಸುದ್ದಿಗಳು ಚನ್ನಪಟ್ಟಣ ಉಪಚುನಾವಣೆ: ನ.12ರ ಸಂಜೆಯಿಂದ ನ.14ರವರೆಗೆ ನಿಷೇಧಾಜ್ಞೆ

ಚನ್ನಪಟ್ಟಣ ಉಪಚುನಾವಣೆ: ನ.12ರ ಸಂಜೆಯಿಂದ ನ.14ರವರೆಗೆ ನಿಷೇಧಾಜ್ಞೆ

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನ.13ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನ.12ರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದ್ದಾರೆ.


ಸಾರ್ವಜನಿಕ ಶಾಂತಿ ಸುವ್ಯವಸ್ಥೆ, ಮುಕ್ತ ಮತ್ತು ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರಂತೆ ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2024ರ ನ.12ರ ಮಂಗಳವಾರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ವಿವಿಧ ಷರತ್ತುಗಳನ್ನು ವಿಧಿಸಿ, ನಿಷೇಧಾಜ್ಞೆ ಹೊರಡಿಸಲಾಗಿದೆ.


ನಿಷೇಧಿತ ಅವಧಿಯಲ್ಲಿ ಯಾವುದೇ ಬಹಿರಂಗ, ಸಾರ್ವಜನಿಕ ಸಭೆ, ಸಮಾರಂಭ, ಜಾಥಾ, ಮೆರವಣಿಗೆ ಇತ್ಯಾದಿಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪುಗೂಡಿ ಓಡಾಡುವುದನ್ನು ನಿಷೇಧಿಸಿದೆ. ಮತದಾನ ಮುಕ್ತಾಯದ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಬಹಿರಂಗ ಪ್ರಚಾರ ಸಭೆ, ಸಮಾರಂಭ ಮತ್ತು ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿರುತ್ತದೆ. ಹಾಗೇ ಅಭ್ಯರ್ಥಿಗಳ ಬೆಂಬಲಿಗರು ಚುನಾವಣಾ ಪ್ರಚಾರಕ್ಕಾಗಿ ಮನೆಮನೆಗೆ ಮತಗಳನ್ನು ಯಾಚಿಸಲು ಐದು ಜನಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ.


ನಿಷೇಧಾಜ್ಞೆ ಅವಧಿಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಮತ್ತು ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದು, ಹಿಡಿದು ಓಡಾಡುವಂತಿಲ್ಲ. ಭಿತ್ತಿ ಪತ್ರ ಹಂಚುವ ಮೂಲಕ ವಾಹನದಲ್ಲಿ ಪ್ರಚಾರ ಮಾಡುವುದು, ಘೋಷಣೆ, ಭಾಷಣ ಮಾಡುವಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಈ ನಿಷೇಧಾಜ್ಞೆಯು ಮದುವೆ, ಮುಂಜಿ, ಶವಸಂಸ್ಕಾರ ಕಾರ್ಯಗಳಿಗೆ ಅನ್ವಯವಾಗುವುದಿಲ್ಲ.

Join Whatsapp
Exit mobile version