ಕಲಬುರಗಿ: ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ (SEP) ಜಾರಿಗೊಳಿಸುತ್ತೇವೆ. ಈ ಹಿಂದೆ ತರಾತುರಿಯಲ್ಲಿ ಎನ್ ಇಪಿ ಜಾರಿಗೊಳಿಸಲಾಗಿತ್ತು ಎಂದು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೀಗ ಹದಿನೈದು ಸಾವಿರ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ 32 ವಿಶ್ವವಿದ್ಯಾಲಯಗಳಿವೆ. ಆಯವ್ಯಯದ ಆರು ಶೇಕಡಾ ಅನುದಾನ ಶಿಕ್ಷಣ ಇಲಾಖೆಗೆ ನೀಡಬೇಕು ಎಂದು ಹೇಳಲಾಗುತ್ತದೆ. ಆದರೆ ಹಿಂದಿನ ಸರ್ಕಾರ 5400 ಕೋಟಿ ರೂ. ನೀಡಿತ್ತು. ಬಜೆಟ್ನ ಶೇಕಡಾ 1.7 ರಷ್ಟು ಅನುದಾನ ಮಾತ್ರ ಉನ್ನತ ಶಿಕ್ಷಣ ಇಲಾಖೆಗೆ ಬಂದಿದೆ. ಬಹುತೇಕ ಅನುದಾನ ಸಂಬಳಕ್ಕೆ ಹೋಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇಲಾಖೆಯ ಅನುದಾನ ಹೆಚ್ಚಾಗಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಅತಿಥಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.