ಬೆಂಗಳೂರು: ಜೆಜೆ ನಗರ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರು ಸ್ನೇಹಿತ ಸೈಮನ್ ರಾಜ್ ಆರ್ ಎಸ್ ಎಸ್ ನಿಂದ ಹಣ ಪಡೆದು ಸುಳ್ಳು ಹೇಳಿಕೆ ನೀಡಿದ್ದಾನೆ ಎಂದು ಶಾಸಕ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.
ನೀವು ಸೈಮನ್ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸಿರುವುದು ನಮಗೇನೂ ಗೊತ್ತಿಲ್ಲ ಎಂದು ಕೊಂಡಿದ್ದೀರಾ ಮಾನ್ಯ ರವಿಕುಮಾರ್ ಅವರೇ? ನೀವು ಬಾಯಿಗೆ ಬಂದಂತೆ ಬಣ್ಣ ಹಚ್ಚಿ ಕಥೆ ಹೇಳಿದರೆ ಸತ್ಯ ಎಂದಿಗೂ ಸುಳ್ಳಾಗದು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅಷ್ಟಕ್ಕೂ ಅವರನ್ನು ನೇಮಿಸಿರುವುದು ನಿಮ್ಮ ಬಿಜೆಪಿ ಸರ್ಕಾರವೇ. ಇದೀಗ ನೀವೇ ಅವರ ಮೇಲೆ ಬೆರಳು ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಇದೀಗ ಚಂದ್ರು ಸ್ನೇಹಿತ ಸೈಮನ್ ರಾಜ್ ಕಣ್ಮರೆಯಾಗಿದ್ದು, ಆತನ ಹೇಳಿಕೆಗಳು ಭಾರೀ ವಿವಾದಕ್ಕೆ ಕಾರಣವಾಗಿದೆ. ಕೊಲೆಯಾದ ದಿನ ನನ್ನ ಹುಟ್ಟಹಬ್ಬ ಇತ್ತು. ನಾನು ಮತ್ತು ಚಂದ್ರು ಚಿಕನ್ ರೋಲ್ ತಿನ್ನಲು ಹಳೆಗುಡ್ಡದ ಹಳ್ಳಿಗೆ ಹೋಗಿದ್ದೆವು. ಅಲ್ಲಿನ ಅಂಗಡಿ ಮುಚ್ಚಿದ್ದರಿಂದ ಬೇಕರಿಗೆ ಹೋಗುವ ವೇಳೆ ಬೈಕ್ ಡಿಕ್ಕಿಯಾದ ವಿಚಾರವಾಗಿ ಸ್ಥಳೀಯ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಮೂರು ಜನ ಬಂದು ಚಾಕು ತೆಗೆದಾಗ ಚಂದ್ರುವನ್ನು ಓಡಲು ಹೇಳಿ ನಾನು ಅವರನ್ನು ತಳ್ಳಿ ಓಡಿ ಹೋಗಿದ್ದೆ. ಬಳಿಕ ಚಂದ್ರುಗೆ ಫೋನ್ ಮಾಡಿದಾಗ ಫೋನ್ ತೆಗೆದಿರಲಿಲ್ಲ. ಘಟನಾ ಸ್ಥಳಕ್ಕೆ ವಾಪಸ್ ಬಂದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂತರ ಆಟೋದಲ್ಲಿ ಹಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದೆ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ಸೈಮನ್ ಹೇಳಿದ್ದ.
ಸೈಮನ್ ಗೆ ಆರ್ ಎಸ್ ಎಸ್ ನಿಂದ 5 ಲಕ್ಷ ಹಣ ನೀಡಲಾಗಿದೆ ಎಂದು ಬಿಜೆಪಿ ವಿರುದ್ಧ ಜಮೀರ್ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಆತ ಕಣ್ಮರೆಯಾಗಿದ್ದಾನೆ ಎಂಬ ಮಾಹಿತಿ ದೊರಕಿದೆ.
ಸೈಮನ್ ಗೆ ರಾಜಕೀಯ ಮುಖಂಡರ ಆಶ್ರಯದ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಸಿಕ್ಕಿದ್ದು, ನಿಜಕ್ಕೂ ಆತ ಹಣ ಪಡೆದೇ ಹೇಳಿಕೆ ಕೊಟ್ಟಿದ್ದಾ ಎಂಬ ಅನುಮಾನ ದಟ್ಟವಾಗುತ್ತಿದೆ.