ಚಿಕ್ಕಮಗಳೂರು: ಚಂದ್ರೇಗೌಡರು ಅತ್ಯುತ್ತಮ ವಿಧಾನಸಭಾಧ್ಯಕ್ಷರು ಎಂದು ಎಲ್ಲರಿಂದ ಪ್ರಶಂಸೆ ಪಡೆದಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ದಿವಂಗತ ಡಿ ಬಿ ಚಂದ್ರೇಗೌಡ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ದಾರದಹಳ್ಳಿ ಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ವಿಧಾನಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು ಬಹಳ ಕಷ್ಟವಿದೆ. ಬಹಳ ಚಾಕಚಕ್ಯತೆ ಯಿಂದ ಎರಡು ವರ್ಷ ಈ ಕಾರ್ಯ ನಿರ್ವಹಿಸಿದ್ದರು. ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿಗಳಾಗಿದ್ದಾಗ ಬಿಜೆಪಿ ಬೆಂಬಲ ಪಡೆದಿದ್ದರು. ನಂತರ ನಮ್ಮ ಜೊತೆಗಿದ್ದು ರಾಜ್ಯಸಭಾ ಸದಸ್ಯರಾದರು. ಪುನಃ ಕಾಂಗ್ರೆಸ್ ಸೇರಿ ಶಾಸಕ ಹಾಗೂ ಮಂತ್ರಿಯಾಗಿದ್ದರು. ಚಂದ್ರೇಗೌಡರು ಪ್ರಜಾಪ್ರಭುತ್ವದ ನಾಲ್ಕೂ ವೇದಿಕೆಯನ್ನು ಪ್ರತಿನಿಧಿಸಿದ್ದರು. ಇದಾಗುವುದು ಬಹಳ ಅಪರೂಪ. ಅವರ ಸಾವಿನಿಂದ ಕರ್ನಾಟಕ ರಾಜಕಾರಣಕ್ಕೆ ನಷ್ಟ ಉಂಟಾಗಿದೆ. ಅವರ ಕುಟುಂಬದವರಿಗೆ ಅವರ ಸಾವಿನಿಂದಾಗಿರುವ ದುಃಖವನ್ನು ಭರಿಸುವ ಶಕ್ತಿ ನೀಡಲಿ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದರು.