ಚಂಡೀಗಢ: ವೇಗವಾಗಿ ಬಂದ ಟ್ರಕ್ ರಸ್ತೆ ಬದಿಯಲ್ಲಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಜಾಜ್ಜರ್ ಜಿಲ್ಲೆಯ ಟೋಲ್ ಪ್ಲಾಜಾ ಬಳಿ ಇಂದು ನಸುಕಿನಲ್ಲಿ ನಡೆದಿದೆ.
ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಗಾಯಗೊಂಡ 12 ಮಂದಿಯಲ್ಲಿ ಗಂಭೀರವಾಗಿರುವ 10 ಮಂದಿಯನ್ನು ರೊಹ್ಟಕ್ನಲ್ಲಿರುವ ಪಿಜಿಐಎಂಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಯಶ್ವರ್ಧನ್ ಹೇಳಿದ್ದಾರೆ.
ದುರ್ಘಟನೆಯು ಟೋಲ್ ಪ್ಲಾಜಾದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಕುಂಡ್ಲಿ-ಮನೇಸಾರ್ ಪಲ್ವಾಲ್ ಎಕ್ಸ್ಪ್ರೆಸ್ವೇನಲ್ಲಿ ನಡೆದಿದ್ದು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿದ್ದು ಟ್ರಕ್ ಉರುಳಿಬಿದ್ದಿರುವುದು ಮತ್ತು ವಲಸೆ ಕಾರ್ಮಿಕರ ರಕ್ತಸಿಕ್ತ ಮೃತದೇಹ ದೃಶ್ಯಗಳು ಭಯಾನಕವಾಗಿವೆ.
ಹತ್ತಿರದಲ್ಲೇ ನಡೆಯುತ್ತಿದ್ದ ನಿರ್ಮಾಣ ಯೋಜನೆಯಲ್ಲಿ ಸುಮಾರು 18 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿದ ಬಳಿಕ ಪ್ರತಿದಿನ ಎಕ್ಸ್ಪ್ರೆಸ್ವೇ ಪಕ್ಕದಲ್ಲಿ ಮಲಗುತ್ತಿದ್ದರು ನಸುಕಿನ ಜಾವ ನಿಯಂತ್ರಣ ಕಳೆದುಕೊಂಡ ಟ್ರಕ್ ಕಾರ್ಮಿಕರ ಮೇಲೆ ಹರಿದು ದುರಂತ ಸಂಭವಿಸಿದೆ.
ಕಾರ್ಮಿಕರು ಯಾವ ಕೆಲಸ ಮಾಡುತ್ತಿದ್ದರು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿರುವ ಯಶ್ವರ್ಧನ್, ಸೇತುವೆ ನಿರ್ಮಾಣ ಯೋಜನೆಯಲ್ಲಿ ಕಾರ್ಮಿಕರು ತೊಡಗಿಕೊಂಡಿದ್ದರು ಎಂದು ಹೇಳಿದ್ದಾರೆ. ಮೃತರ ಹೆಸರು ಇನ್ನು ಖಚಿತವಾಗಿಲ್ಲ. ಆದರೆ, ಕಾರ್ಮಿಕರು ಉತ್ತರ ಪ್ರದೇಶದ ಎರಡು ಜಿಲ್ಲೆಗಳಿಗೆ ಸಂಬಂಧಿಸಿದವರು ಎಂದು ತಿಳಿದುಬಂದಿದೆ.
ಘಟನೆ ನಡೆದ ಬೆನ್ನಲ್ಲೇ ಟ್ರಕ್ ಡ್ರೈವರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಟ್ರಕ್ ನೋಂದಣಿ ನಂಬರ್ನಿಂದ ಮಾಲೀಕನನ್ನು ಪತ್ತೆಹಚ್ಚಲಾಗಿದೆ. ಟ್ರಕ್ನಲ್ಲಿ ಇಬ್ಬರು ಚಾಲಕರು ಮತ್ತು ಒಬ್ಬ ಸಹಾಯಕ ಇದ್ದರು ಎಂದು ಮಾಹಿತಿ ನೀಡಿದ್ದಾರೆ. ಅವರ ಹೆಸರುಗಳು ನಮಗೆ ತಿಳಿದಿದೆ. ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.