Home ಟಾಪ್ ಸುದ್ದಿಗಳು ಚಾಮರಾಜನಗರ ಆಕ್ಸಿಜನ್ ದುರ್ಘಟನೆ: ಸಂತ್ರಸ್ತರೊಂದಿಗೆ ಶಾಸಕರ ಭವನದಲ್ಲಿ ಸಮಾಲೋಚನೆ ಸಭೆ

ಚಾಮರಾಜನಗರ ಆಕ್ಸಿಜನ್ ದುರ್ಘಟನೆ: ಸಂತ್ರಸ್ತರೊಂದಿಗೆ ಶಾಸಕರ ಭವನದಲ್ಲಿ ಸಮಾಲೋಚನೆ ಸಭೆ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 2021 ನೇ ಮೇ 2 ರ ಮಧ್ಯರಾತ್ರಿ ಆಕ್ಸಿಜನ್ ಪೂರೈಕೆಯಾಗದೆ 37 ಮಂದಿ ಮೃತರಾಗಿ ಈಗಾಗಲೇ 9 ತಿಂಗಳು ಕಳೆದಿದ್ದು, ಘಟನೆಗೆ ಸಂಬಂಧಿಸಿದಂತೆ ನೇಮಕಗೊಂಡ ನ್ಯಾಯಮೂರ್ತಿ ವೇಣುಗೋಪಾಲಗೌಡ ಸಮಿತಿ ವರದಿಯಲ್ಲಿ ಘಟನೆಗೆ ಆಕ್ಸಿಜನ್ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಅಂದಿನ ಜಿಲ್ಲಾಧಿಕಾರಿಗಳ ಕಾರ್ಯವೈಖರಿಯ ವಿಫಲತೆಯಿಂದ ಘಟನೆ ಸಂಭವಿಸಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಸೇರಿದಂತೆ ಯಾವ ಒಬ್ಬ ವೈದ್ಯಾಧಿಕಾರಿಯ ವಿರುದ್ಧ ಸರ್ಕಾರ ಇದುವರೆಗೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆರೋಪಿದ್ದಾರೆ.

ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರ್ಘಟನೆ ಸಂಬಂಧ ಶಾಸಕರ ಭವನದಲ್ಲಿ ನಡೆದ ಸಮಾಲೋಚನೆ ಸಭೆ ಬಳಿಕ ಮಾತನಾಡಿದ ಅವರು,
ಇನ್ನೊಂದು ಕಡೆ ಸರ್ಕಾರ ನೇಮಕ ಮಾಡಿರುವ ಏಕಸದಸ್ಯ ಆಯೋಗದ ಅಧ್ಯಕ್ಷ ಬಿ.ಎ ಪಾಟೀಲ್ ವರದಿ ಸಹ ಬಹಿರಂಗಗೊಂಡಿಲ್ಲ. ಒಟ್ಟು 37 ಮೃತರ ಕುಟುಂಬಸ್ಥರ ಪೈಕಿ ಕೇವಲ 24 ಮಂದಿಯ ಕುಟುಂಬಸ್ಥರಿಗೆ ಅಲ್ಪಸ್ವಲ್ಪ ಪರಿಹಾರ ನೀಡಿದೆ. ಇನ್ನು 13 ಸಂತ್ರಸ್ಥ ಕುಟುಂಬಸ್ಥರಿಗೆ ಪರಿಹಾರದ ಒಂದು ನಯಾಪೈಸೆ ಸಹ ನೀಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುರ್ಘಟನೆಗೆ ಬಲಿಯಾದವರಲ್ಲಿ ಶೇಕಡ 50ಕ್ಕಿಂತ ಹೆಚ್ಚು ಎಸ್.ಸಿ./ಎಸ್.ಟಿ. ಸಮುದಾಯದವರು ಸೇರಿದ್ದು, ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಆಧಾರ ಸ್ಥಂಭವಾಗಿದ್ದ ಮನೆಯ ಯಜಮಾನ ಇಲ್ಲದೇ ಈ ಬಡಪಾಯಿ ಕುಟುಂಬಸ್ಥರ ಜೀವನ ಅಸ್ತವ್ಯಸ್ತವಾಗಿದ್ದು, ಸಂತ್ರಸ್ತರ ಕುಟುಂಬಸ್ಥರಲ್ಲಿ ಮಕ್ಕಳು ಸಹ ಇದ್ದು, ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಆರೈಕೆಗೆ ಬಹಳ ತೊಂದರೆ ಆಗುತ್ತಿದೆ. ಸಂತ್ರಸ್ಥರ ಈ ದುಸ್ಥಿತಿಯನ್ನು ನೋಡಿಕೊಂಡು ರಾಜ್ಯ ಸರ್ಕಾರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ. ಸಂತ್ರಸ್ತರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಸಂತ್ರಸ್ತ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ, ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ* ಜರುಗಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಂತ್ರಸ್ಥರ ಪರವಾಗಿ ರಾಜ್ಯಪಾಲರಿಗೆ ಮನವಿ ನೀಡಲಾಗುವುದು ಹಾಗೂ ಅಂತಿಮವಾಗಿ ಸಂತ್ರಸ್ತರಿಗೆ ನ್ಯಾಯ ಸಿಗುವರೆಗೂ ಎಸ್.ಡಿ.ಪಿ.ಐ ತನ್ನ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.


ಈ ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ. ಎಸ್ ದ್ವಾರಕನಾಥ್, ಚಾಮರಾಜನಗರ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಬ್ರಾರ್ ಆಹಮದ್, ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, ಅಫ್ಸರ್ ಕೂಡ್ಲೀಪೇಟೆ, ಹೈಕೋರ್ಟ್ ವಕೀಲರಾದ ಮಜೀದ್ ಖಾನ್, ರಾಜ್ಯ ಮಾಧ್ಯಮ ಸಂಯೋಜಕರಾದ ರಿಯಾಜ್ ಕಡಂಬು, ಚಾಮರಾಜನಗರ ನಗರಸಭಾ ಸದಸ್ಯ ಮಹೇಶ್ ಹಾಗೂ ಸಂತ್ರಸ್ತ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು

Join Whatsapp
Exit mobile version