Home ಟಾಪ್ ಸುದ್ದಿಗಳು ಸಂವಿಧಾನ ರಚನಾ ಕರಡು ಸಮಿತಿಯಲ್ಲಿದ್ದ ಏಕೈಕ ಮುಸ್ಲಿಂ ಹೆಸರನ್ನು ತೆಗೆದು ಹಾಕಿದ ‘ಚಕ್ರತೀರ್ಥನ ಯಡವಟ್ಟು ಸಮಿತಿ’...

ಸಂವಿಧಾನ ರಚನಾ ಕರಡು ಸಮಿತಿಯಲ್ಲಿದ್ದ ಏಕೈಕ ಮುಸ್ಲಿಂ ಹೆಸರನ್ನು ತೆಗೆದು ಹಾಕಿದ ‘ಚಕ್ರತೀರ್ಥನ ಯಡವಟ್ಟು ಸಮಿತಿ’ !

►► ಅಂಬೇಡ್ಕರ್ ಅವರ “ಸಂವಿಧಾನ ಶಿಲ್ಪಿ” ಬಿರುದಿಗೂ ಕತ್ತರಿ

ಬೆಂಗಳೂರು: ರೋಹಿತ್ ಚಕ್ರತೀರ್ಥನ ಸಮಿತಿಯ ಮತ್ತೊಂದು ಯಡವಟ್ಚು ಬೆಳಕಿಗೆ ಬಂದಿದೆ. ಸಂವಿಧಾನ ರಚನಾ ಕರಡು ಸಮಿತಿಯಲ್ಲಿದ್ದ ಏಕೈಕ ಮುಸ್ಲಿಂ ಹೆಸರನ್ನು ರೋಹಿತ್ ಚಕ್ರತೀರ್ಥನ ಪಠ್ಯ ಪರಿಷ್ಕರಣೆಯ ಸಮಿತಿ ತೆಗೆದು ಹಾಕಿದೆ. ಅದರೊಂದಿಗೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರಿಗಿದ್ದ ‘ಸಂವಿಧಾನ ಶಿಲ್ಪಿ’ ಬಿರುದಿಗೂ ಕತ್ತರಿ ಹಾಕಿದೆ.

9ನೇ ತರಗತಿ ಪಠ್ಯಪುಸ್ತಕದಲ್ಲಿ ಪರಿಷ್ಕರಣೆಯ ವೇಳೆ ಸಂವಿಧಾನ ಕರಡು ರಚನೆಯ ಸಮಿತಿಯಲ್ಲಿ ಅನೇಕ ಮುತ್ಸದ್ಧಿಗಳ ಹೆಸರಿನ ಪೈಕಿಯಲ್ಲಿದ್ದ ಏಕೈಕ ಮುಸ್ಲಿಂ ಸದಸ್ಯ ಮುಹಮ್ಮದ್ ಸಾದುಲ್ಲಾ ಹೆಸರನ್ನು ರೋಹಿತ್ ಚಕ್ರತೀರ್ಥನ ಸಮಿತಿ ಅಳಿಸಿ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.

ಇಷ್ಟಕ್ಕೇ ನಿಲ್ಲದ ಯಡವಟ್ಟು ಸಮಿತಿಯ ವಿವಾದ ಡಾ.ಬಿ.ಆರ್.ಅಂಬೇಡ್ಕರ್ ರವರಿಗಿದ್ದ ‘ಸಂವಿಧಾನ ಶಿಲ್ಪಿ’ ಬಿರುದನ್ನು ಪಠ್ಯಪುಸ್ತಕದಲ್ಲಿ ಉಲ್ಲೇಖಿಸದೇ ವಿಕೃತಿ ಮೆರೆದಿದೆ.

ಅಂಬೇಡ್ಕರ್ ಬಿರುದನ್ನು ಉಲ್ಲೇಖಿಸದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ದಲಿತೋದ್ಧಾರಕರ ರೀತಿ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಗರ ಅಸಲಿ ಮುಖವಾಡ ಕಳಚಿ ಬಿದ್ದಿದೆ ಎಂದು ಹರಿಹಾಯ್ದಿದೆ. ಸಮಾನತೆಗಾಗಿ ಹಗಲಿರುಳು ದುಡಿದು ಈ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ನೀಡಿದ ಬಾಬಾಸಾಹೇಬರನ್ನು ಸಂವಿಧಾನಶಿಲ್ಪಿ ಎನ್ನಲು ಅಂಜಿಕೆ ಅಳುಕು ಇವರಿಗೆ. ದಲಿತ ನಾಯಕ ಸಂವಿಧಾನ ಶಿಲ್ಪಿ ಆದರೆಂಬ ಅಸಹನೆಯೇ ಈ ಬಿಜೆಪಿಯವರಿಗೆ? ಎಂದು ಕಾಂಗ್ರೆಸ್ ಕಿಡಿಕಾರಿದೆ.

Join Whatsapp
Exit mobile version