ಉಡುಪಿ: ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಬಂಧನದ ನಂತರ ಆಕೆಯ ಒಂದೊಂದೇ ಅವಾಂತರಗಳು ಹೊರಬರುತ್ತಿದೆ.
ಆರೋಪಿ ಚೈತ್ರಾ ಕುಂದಾಪುರ ಕುರಿತು ಬಿಜೆಪಿಯ ಹಿರಿಯ ನಾಯಕಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ಮಾಡಿದ್ದ ಟ್ವೀಟ್ ಈಗ ವೈರಲ್ ಆಗಿದೆ.
ಕೇಂದ್ರ ಸಚಿವೆ ಮಾಡಿದ್ದ ಆ ಟ್ವೀಟ್ ನಿಂದ ಪ್ರವರ್ಧಮಾನಕ್ಕೆ ಬಂದಿದ್ದ ಚೈತ್ರಾ ಕುಂದಾಪುರ, ಆ ಬಳಿಕ ರಾಜ್ಯಾದ್ಯಂತ ತನ್ನ ಹವಾ ಕ್ರಿಯೇಟ್ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ.
2018ರಲ್ಲಿ ನಡೆದ ಕಾಂಗ್ರೆಸ್, ಎಡಪಕ್ಷಗಳ ಭಾರತ್ ಬಂದ್ ವಿರೋಧಿಸಿದ್ದ ಚೈತ್ರಾ ಕುಂದಾಪುರ, ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಜಗಳಕ್ಕಿಳಿದಿದ್ದಳು. ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದಳು.
2018 ರಲ್ಲಿ ನಡೆದ ಈ ಪ್ರತಿಭಟನೆ ವೇಳೆ ಚೈತ್ರಾ ಡೇರಿಂಗ್ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಟ್ವೀಟ್ ಮಾಡಿದ್ದರು. ಈ ಘಟನೆ ಕುರಿತ ವೀಡಿಯೋ ಒಂದನ್ನು ರೀಟ್ವೀಟ್ ಮಾಡಿ ಚೈತ್ರಾ ಕುಂದಾಪುರಳನ್ನು ‘ಡೇರಿಂಗ್ ಗರ್ಲ್’ ಎಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ “ಪ್ರಧಾನಿ ಮೋದಿ ಮೇಲಿನ ನಂಬಿಕೆ ತೋರಿಸುವಲ್ಲಿನ ಈ ಯುವತಿಯ ಧೈರ್ಯ ಗಮನಾರ್ಹ” ಎಂದು ಹೇಳಿದ್ದರು.
ಜೊತೆಗೆ ನಿರ್ಮಲಾ ಸೀತರಾಮನ್ ಟ್ವೀಟ್ ನಿಂದ ತನಗೆ ಬಿಜೆಪಿಯ ಕೇಂದ್ರದ ಜೊತೆಗೆ ಲಿಂಕ್ ಇರುವುದಾಗಿ ಬಿಂಬಿಸಿಕೊಂಡಿದ್ದಳು. ಇದನ್ನೇ ಗೋವಿಂದ ಪೂಜಾರಿಗೆ ನಂಬಿಸಿ ಪಂಗನಾಮ ಹಾಕಿದ್ರು ಎನ್ನಲಾಗಿದೆ.