ಬೆಂಗಳೂರು: ಬಿಜೆಪಿ ಟಿಕೆಟ್ ಕೊಡುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ ಮತ್ತು ಇತರ ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.ಈ ನಡುವೆ ಪ್ರಕರಣದ ಆರೋಪಿಗಳ ಆಸ್ತಿ ಶೋಧ ಪ್ರಕ್ರಿಯೆಯನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದಾರೆ.
ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಠೇವಣಿ ಹಾಗೂ ಕಾರು ಜಪ್ತಿ ಮಾಡಲಾಗಿದೆ. ಶನಿವಾರ, 81 ಲಕ್ಷ ನಗದು ಜಪ್ತಿ ಮಾಡಲಾಗಿದ್ದು, ನಂತರ ಆರೋಪಿಗಳ ಎಫ್.ಡಿ ಖಾತೆಯಲ್ಲಿ ಒಟ್ಟು 1.08 ಕೋಟಿ ಠೇವಣಿ ಪತ್ತೆಯಾಗಿದೆ. ಬ್ಯಾಂಕ್ ಗಳ ಮೂಲಕ ಠೇವಣಿಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಂಚನೆ ಹಣದಲ್ಲಿ ಆರೋಪಿಗಳು 12 ಲಕ್ಷ ರೂ ಮೌಲ್ಯದ ಕಿಯಾ ಕಾರು ಖರೀದಿಸಿದ್ದರು. ಸೊಲ್ಲಾಪುರದ ಬಾರ್ ವೊಂದರ ಎದುರು ಕಾರು ನಿಲ್ಲಿಸಲಾಗಿತ್ತು. ಚೈತ್ರಾ ಸ್ನೇಹಿತ ಬಾಗಲಕೋಟೆ ಮೂಲದ ಕಿರಣ್, ಕಾರು ತೆಗೆದುಕೊಂಡು ಬಂದು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ವಾಹನ ಚಾಲನಾ ತರಬೇತಿ ಕೇಂದ್ರ ನಡೆಸುತ್ತಿರುವ ಕಿರಣ್, ಅದೇ ಕಾರು ಬಳಸುತ್ತಿದ್ದರು. ಅವರ ಬಳಿ ಕಾರು ಇರುವುದು ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರು ಜಪ್ತಿ ಮಾಡಿದ್ದಾರೆ.