ಶಿಕ್ಷಣ ನೀತಿ ವಿರೋಧಿಸಿ ಸಚಿವ ಅಶ್ವತ್ಥನಾರಾಯಣ ಮನೆಗೆ ಕ್ಯಾಂಪಸ್ ಫ್ರಂಟ್ ಮಾರ್ಚ್: ಕಾರ್ಯಕರ್ತರು ವಶಕ್ಕೆ

Prasthutha|

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ರವರ ಕಚೇರಿಗೆ ಮಾರ್ಚ್ ನಡೆಸಿದ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

- Advertisement -


ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಅಶ್ವತ್ಥನಾರಾಯಣ ಅವರ ಮನೆಗೆ ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳು ಜಾಥಾ ನಡೆಸಿದರು. ಬಳಿಕ ಅಶ್ವತ್ಥ್ ನಾರಾಯಣ ಮನೆ ಮುಂದೆ ಧರಣಿ ಕುಳಿತ ಕಾರ್ಯಕರ್ತರು, ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಸಚಿವರು ಬರಲೇಬೇಕು ಎಂದು ಒತ್ತಾಯಿಸಿದರು.


ಈ ವೇಳೆ ಮಾತನಾಡಿದ ಸಿಎಫ್ಐ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ, ನೂತನ ಶಿಕ್ಷಣ ನೀತಿಯು ಬಿಜೆಪಿಯ ಹಿಡನ್ ಅಜೆಂಡವಾಗಿದ್ದು, ಕೋವಿಡ್ ಸಂಕಷ್ಟದ ಮಧ್ಯೆ ಸರ್ಕಾರ ತರಾತುರಿಯಲ್ಲಿ ಈ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ರಾಜ್ಯದ ಪಟ್ಟಿಯಲ್ಲಿರುವ ಶಿಕ್ಷಣದ ಮೇಲೆ ಹಸ್ತಕ್ಷೇಪ ಮಾಡಿ ಕೇಂದ್ರ ಸರ್ಕಾರ ತನ್ನ ಮೂಗಿನ ನೇರಕ್ಕೆ ನೀತಿ ತಯಾರಿಸಿದೆ.

- Advertisement -

ನಾಗಾಪುರದವರು ಮತ್ತು ಗುಜರಾತಿಗಳನ್ನು ಸಂತುಷ್ಟಿಗೊಳಿಸಲು ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಯಾವುದೇ ಸಮಾಲೋಚನೆ, ಚರ್ಚೆ ಇಲ್ಲದೆ ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ಮುಂದಾಗಿದ್ದಾರೆ ಎಂದು ದೂರಿದರು.
ಶಾಲಾ ಕಾಲೇಜು, ವಿವಿಗಳಲ್ಲಿ ಕೋಮುವಾದವನ್ನು ತುರುಕಲು ಪ್ರಯತ್ನಿಸಲಾಗುತ್ತಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದಿಲ್ಲೊಂದು ಕಾನೂನಿನ ಮೂಲಕ ಜನರ ಮೇಲೆ ಪ್ರಹಾರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೂ ಮಾರ್ಚ್ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ಪೊಲೀಸರು ಸಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

Join Whatsapp