ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಖಾಸಗಿ ಆಸ್ಪತ್ರೆಗಳ ಮೆಡಿಕಲ್ ಮಾಫಿಯಾಕ್ಕೆ ಪರ್ಯಾಯವಾಗಿ ಜಿಲ್ಲೆಗೆ ತುರ್ತಾಗಿ ಸರಕಾರಿ ಮೆಡಿಕಲ್ ಕಾಲೇಜಿನ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜನಾಂದೋಲನವನ್ನ ಹಮ್ಮಿಕೊಳ್ಳುವುದಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
“ಮೆಡಿಕಲ್ ಕ್ಷೇತ್ರ ಅನ್ನೊದು ಇಂದು ಕಾರ್ಪೊರೇಟ್ ಕ್ಷೇತ್ರವಾಗಿ ಬದಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಖಾಸಗಿ ಆಸ್ಪತ್ರೆ ಜೊತೆಗಿನ ಒಳ ಒಪ್ಪಂದದಿಂದಾಗಿ ಇದುವರೆಗೂ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಿಸಲು ಸಾಧ್ಯವಾಗಿಲ್ಲ. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆಯುವುದು ಕಷ್ಟಕರವಾಗಿದೆ. ಅಲ್ಲದೇ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ನೀಡುವ ಸರಕಾರಿ ಕೋಟಾದ ಸೀಟ್ಗೂ ಬಡ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ವ್ಯಯಿಸಬೇಕಿದೆ. ಕೊಡಗಿನಂತಹ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಸಾಧ್ಯವಾಗಿದೆ ಎಂದಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಯಾಕಾಗಿ ಸಾಧ್ಯವಾಗಿಲ್ಲ?” ಎಂದು ಅವರು ಪ್ರಶ್ನಿಸಿದರು.
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜುಗೆಂದು ಮೀಸಲಿಟ್ಟ ಜಾಗದಲ್ಲಿ ಇದುವರೆಗೂ ಅದಕ್ಕೆ ಸಂಬಂಧಿಸಿ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಕಾರ್ಯ ಕೈಗೊಳ್ಳದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸೂಚಿಸುತ್ತಿರುವುದಾಗಿ ಆರೋಪಿಸಿದರು.
ಅದೇ ರೀತಿ ಇತ್ತೀಚೆಗೆ ಹೆರಿಗೆ ಸಮಯದಲ್ಲಿ ಜಾಸ್ಮಿನ್ ಎಂಬವರನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ ಪ್ರಕರಣ ಸಂಬಂಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತವನ್ನ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಇನಾಯತ್ ಮಂಗಳೂರು, ಮಂಗಳೂರು ಗ್ರಾಮಾಂತರ ಅಧ್ಯಕ್ಷ ಸರಫುದ್ದೀನ್, ಜಿಲ್ಲಾ ಮುಖಂಡರಾದ ಸಿರಾಜ್, ಅರ್ಫೀದ್ ಅಡ್ಕಾರ್ ಉಪಸ್ಥಿತರಿದ್ದರು.