Home ಟಾಪ್ ಸುದ್ದಿಗಳು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ವಿಧ್ಯುಕ್ತ ಚಾಲನೆ: ಪುನೀತ್ , ಬಿಪಿನ್ ರಾವತ್ ಸೇರಿ ಅಗಲಿದ ಗಣ್ಯರಿಗೆ...

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ವಿಧ್ಯುಕ್ತ ಚಾಲನೆ: ಪುನೀತ್ , ಬಿಪಿನ್ ರಾವತ್ ಸೇರಿ ಅಗಲಿದ ಗಣ್ಯರಿಗೆ ಸಂತಾಪ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ವಿಧಾನಮಂಡಲದ ಉಭಯ ಸದನಗಳ ಆರಂಭದ ಕಲಾಪದಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.


ವಿಧಾನ ಪರಿಷತ್ ಕಲಾಪ ಬೆಳಗ್ಗೆ 11:15ಕ್ಕೆ ವಂದೇಮಾತರಂ ಗೀತೆಯೊಂದಿಗೆ ಆರಂಭಗೊಂಡಿತು.ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ರಾಜ್ಯಪಾಲರ ಭಾಷಣದ ಪ್ರತಿಯನ್ನು ಸದನದ ಮುಂದೆ ಮಂಡಿಸಿದರು.


ಇತ್ತೀಚಿಗೆ ಹೆಲಿಕಾಫ್ಟರ್ ದುರಂತದಲ್ಲಿ ನಿಧನರಾದ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ.ರೋಸಯ್ಯ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಅಗಲಿದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.


ಬಳಿಕ ಸಂತಾಪ ಸೂಚನೆ ನಿಲುವಳಿಯನ್ನು ಕೈಗೆತ್ತಿಕೊಳ್ಳಲಾಯಿತು. ಕರ್ನಾಟಕದ ಮಾಜಿ ರಾಜ್ಯಪಾಲ ಕೆ.ರೋಸಯ್ಯ, ಮಾಜಿ ಸಂಸದ ವಿರುಪಾಕ್ಷಪ್ಪ ಸಂಗಣ್ಣ ಅಗಡಿ, ಮಾಜಿ ಶಾಸಕ ಎಸ್. ಆರ್.ಮೋರೆ, ನಟರಾದ ಪುನೀತ್ ರಾಜ್ ಕುಮಾರ್, ಶಿವರಾಂ ಸೇರಿದಂತೆ ವಿವಿಧ ಕ್ಷೇತ್ರದಲ್ಲಿನ 9 ಮಂದಿ ಗಣ್ಯರ ನಿಧನಕ್ಕೆ ಸಭಾಪತಿ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸೇರಿದಂತೆ ಹಲವು ಸದಸ್ಯರು, ಗಣ್ಯರ ಸಾಧನೆಗಳನ್ನು ಸ್ಮರಿಸಿದರು.


ಸಭಾಪತಿ ಬಸವರಾಜ ಹೊರಟ್ಟಿ ಅವರು, ಪುನೀತ್ ರಾಜ್ ಕುಮಾರ್ ಅವರು ಬಾಲ ಕಲಾವಿದರಾಗಿ ಪ್ರೇಕ್ಷಕ ಹುಬ್ಬೇರುವಂತೆ ನಟಿಸಿದ ಅಮೋಘ ಚಿತ್ರಗಳು ಚಿರಸ್ಥಾಯಿಯಾಗಿವೆ. ಬಾಲ್ಯದಲ್ಲಿ ನಟನೇ ಅಲ್ಲದೆ, ಗಾಯನದಲ್ಲೂ ಮನೆ ಮಾತಾಗಿದ್ದರು.ನೃತ್ಯ, ಸಾಹಸ ಈಜುಕಲೆಗಳಲ್ಲಿ ಪ್ರವೀಣರಾಗಿದ್ದ ಅವರು ಅಭಿನಯದಲ್ಲಿಯೂ ಅಭಿಜಾತರಾಗಿದ್ದರು ಎಂದು ಕೊಂಡಾಡಿದರು.


ಇದುವರೆಗೂ ಬರೋಬ್ಬರಿ 27 ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿ ಭಾರತ ಚಲನ ಚಿತ್ರರಂಗದಲ್ಲಿ ಅಜಾತಶತ್ರುರಾಗಿದ್ದಾರೆ. ಅವರು ಸಿನಿಮಾ ರಂಗಕ್ಕೆ ಸೀಮಿತರಾಗದೆ, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಅಷ್ಟೇ ಅಲ್ಲದೆ, ಸರ್ಕಾರದ ಅನೇಕ ಜಾಹೀರಾತುಗಳಲ್ಲಿ ನಟಿಸಿರುವ ಅವರು, ಯಾವುದೇ ರೀತಿಯ ಸಂಭಾವನೆ ಪಡೆದಿಲ್ಲ. ಅವರು ಈ ಯುವ ಪೀಳಿಗೆಗೆ ಯೂತ್ ಐಕಾನ್ ಆಗಿದ್ದಾನೆ ಎಂದು ಬಣ್ಣಿಸಿದರು.


ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಪುನೀತ್ ಅವರು ಅನೇಕ ಅನಾಥ ಆಶ್ರಮಗಳಿಗೆ ಆಸರೆಯಾಗಿದ್ದರು. ಯಾವುದೇ ರೀತಿಯ ಪ್ರಚಾರ ಇಲ್ಲದೆ, ತಮ್ಮದೇ ಆದ ದಾರಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು, ಹಲವು ಕುಟುಂಬಗಳಿಗೆ ಆಸರೆಯಾಗಿದ್ದರು. ಅವರು ಎಂದಿಗೂ ನಮ್ಮ ಹೃದಯಗಳಲ್ಲಿ ಜೀವಂತವಾಗಿದ್ದಾರೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಅಗಲಿದ ಗಣ್ಯರ ಸೇವೆ ನಾವು ಮರೆಯಲು ಸಾಧ್ಯವಿಲ್ಲ ಎಂದರು.

Join Whatsapp
Exit mobile version