Home ಕರಾವಳಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಲು ಸಿಇಒ ಸಲಹೆ

ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಲು ಸಿಇಒ ಸಲಹೆ

ಮಂಗಳೂರು: ಜಿಲ್ಲೆಯ 98 ಪರೀಕ್ಷಾ ಕೇಂದ್ರಗಳಲ್ಲಿ ಇದೇ ಮಾ. 31 ರಿಂದ ಆರಂಭವಾಗುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಲೋಪಗಳು ಎದುರಾಗದಂತೆ, ವ್ಯವಸ್ಥಿತವಾಗಿ, ಯಶಸ್ವಿಯಾಗಿ ನಡೆಸಿ ಜಿಲ್ಲೆಗೆ ಕೀರ್ತಿ ತರುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ಕರೆ ನೀಡಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸುಸೂತ್ರ ಆಯೋಜನೆ ಕುರಿತಂತೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಅನುಭವವಿದೆ ಹಾಗೂ ಕೌಶಲ್ಯವೂ ಇದೆ. ಆದಾಗ್ಯೂ ಸಮಸ್ಯೆಗಳು ಬಾರದಂತೆ ದೋಷಗಳಿಗೆ ಕಾರಣವಾಗದಂತೆ ಈ ಪರೀಕ್ಷೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿಯೂ ಇದೆ. ಈ ಪರೀಕ್ಷೆಯನ್ನು ಹಬ್ಬದಂತೆ ಆಚರಿಸಬೇಕಾಗಿದೆ ಅದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಸೂಕ್ತವಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ರಾಂಪ್, ಫ್ಯಾನ್, ಕುಡಿಯುವ ನೀರು, ಶೌಚಾಲಯ, ಮುಖ್ಯವಾಗಿ ಡೆಸ್ಕ್ ಗಳು ಉತ್ತಮ ಸ್ಥಿತಿಯಲ್ಲಿರಬೇಕು, ಯಾವುದೇ ಅವ್ಯವಸ್ಥೆಗಳಿದಂತೆ ಮುನ್ನೆಚ್ಚರಿಕ ಕ್ರಮಗಳನ್ನು ವಹಿಸಬೇಕು ಸಿಸಿಟಿವಿ ಅಳವಡಿಕೆಯಾಗಿರಬೇಕು, ನೋಟಿಸ್ ಬೋರ್ಡ್ ಇರಬೇಕು, ಪರೀಕ್ಷಾ ಕಾರ್ಯಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದೆ, ಪರೀಕ್ಷಾ ಸಮಯದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗುವುದು, ಪರೀಕ್ಷಾ ವೇಳೆಯಲ್ಲಿ ಜಾತ್ರೆ ಅಥವಾ ಸಂತೆಗಳು ನಡೆಯುವುದು ಇದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದ ಅವರು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಡಿಎಚ್ ಒಗೆ ಸೂಚಿಸಿದರು.
ಬೇಸಿಗೆ ಕಾಲವಾದ ಕಾರಣ ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಒಆರ್ ಎಸ್ ಪಾಕೇಟ್ಗಳನ್ನು ಇರಿಸುವಂತೆ ತಿಳಿಸಿದ ಅವರು, ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಬಸುಗಳ ವ್ಯವಸ್ಥೆ ಇದೆ, ಮೆಸ್ಕಾಂನಿಂದ ವಿದ್ಯುತ್ ಅಡಚಣೆಯಾಗದಂತೆ ಹಾಗೂ ಆ ಸಂದರ್ಭದಲ್ಲಿ ಅನಿಯಮಿತ ವಿದ್ಯುತ್ ಪೂರೈಕೆಗೆ ಕ್ರಮವಹಿಸುವ ಬಗ್ಗೆ ನಿರ್ದೇಶನ ನೀಡಲಾಗುವುದು ಎಂದರು.
ಕೆಲವೊಂದು ಶಾಲೆಗಳಲ್ಲಿ ಬಲ್ಪ್ ಇಲ್ಲದಿರುವುದು, ಬಾಗಿಲು ಮುರಿದಿರುವುದು, ನಳ್ಳಿ ಇಲ್ಲದಿರುವುದು, ರ್ಯಾಂಪ್ ಸೇರಿದಂತೆ ಸಣ್ಣ ಪುಟ್ಟ ದುರಸ್ತಿ ಮಾಡಿಸಲು 30 ಲಕ್ಷ ರೂ.ಗಳ ಅನುದಾನವ ಬಿಡುಗಡೆ ಮಾಡಲಾಗಿದೆ, ಈ ಅನುದಾನವನ್ನು ಬಳಸಿ ಕೂಡಲೇ ದುರಸ್ತಿ ಕಾರ್ಯ ನಿರ್ವಹಿಸಬೇಕು ಇದು ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೂ ಹಾಗೂ ಮುಂಬರುವ ಚುನಾವಣೆಯ ಮತಗಟ್ಟೆಗೂ ಅನುಕೂಲವಾಗಲಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದಯಾನಂದ ನಾಯಕ್ ಮಾತನಾಡಿ, ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಪೊಲೀಸರೊಂದಿಗೆ ಬಂದು ಪ್ರಶ್ನೆ ಪತ್ರಿಕೆಯನ್ನು ಪಡೆದು ಖಜಾನೆಯಲ್ಲಿ ಸುರಕ್ಷಿತವಾಗಿ ಇರಿಸಬೇಕು, ಯಾವುದೇ ಕಾರಣಕ್ಕೂ ಯಾವುದೇ ವಿದ್ಯಾರ್ಥಿಗೆ ನೆಲ ಅಥವಾ ಜಗ್ಲಿಯ ಮೇಲೆ ಪರೀಕ್ಷೆ ಬರೆಯಲು ಅವಕಾಶ ಕೊಡಬಾರದು, ಡೆಸ್ಕ್ ಕೊರತೆಯಿದ್ದರೆ ಮತ್ತೊಂದು ಶಾಲೆಯಿಂದ ಪಡೆಯಲು ಅವಕಾಶವಿದೆ, ಶೌಚಾಲಯ, ಕುಡಿಯುವ ನೀರು, ಸೋಪು, ಇತ್ಯಾದಿ ವ್ಯವಸ್ಥೆ ಸೂಕ್ತವಾಗಿ ಆಗಬೇಕು, 98 ಪರೀಕ್ಷಾ ಕೇಂದ್ರಗಳಿಗೆ ಅಳವಡಿಸಲಾಗುವ ಸಿಸಿಟಿವಿಯ ಫೂಟೇಜ್ ಅನ್ನು ಪರೀಕ್ಷೆ ಮುಗಿದ ಕೂಡಲೇ ಆಯಾ ಬಿಇಒಗಳಿಗೆ ಸಲ್ಲಿಸಬೇಕು, ನಂತರದಲ್ಲಿ ಅದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ವೇದಿಕೆಯಲ್ಲಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಮೇಲ್ವಿಚಾರಕರು ಹಾಗೂ ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿದ್ದರು.

Join Whatsapp
Exit mobile version