ನವದೆಹಲಿ: ದೇಶದಲ್ಲಿರುವ ಬೆರಳೆಣಿಕೆಯ ಶ್ರೀಮಂತರ ಸಾಲವನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರ ತೆರಿಗೆದಾರರ ಹಣವನ್ನು ದುರುಪಯೋಗ ಮಾಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ತೆರಿಗೆದಾರರ ಹಣವನ್ನು ಸಾರ್ವಜನಿಕರಿಗಾಗಿಯೇ ಉಪಯೋಗಿಸಬೇಕೆ ಹೊರತು ರಾಜಕಾರಣಿಗಳು ತಮ್ಮ ಸ್ನೇಹಿತರ ಸಾಲ ಮನ್ನಾ ಮಾಡಲು ಅಲ್ಲ ಎಂದು ಕಿಡಿಕಾರಿದರು. ಅಲ್ಲದೆ ಕೇಂದ್ರ ಸರ್ಕಾರದ ಹಣಕಾಸಿನ ನೀತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಸಚಿವರು ತಮ್ಮ ಸ್ನೇಹಿತರಿಗಾಗಿ ಸುಮಾರು 10 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡದಿದ್ದರೆ, ಸರ್ಕಾರ ನಮ್ಮ ಸೈನಿಕರ ಹಾಲು, ಮೊಸರು ಅಥವಾ ಪಿಂಚಣಿ ಮೇಲೆ ತೆರಿಗೆ ವಿಧಿಸುವ ಪ್ರಮೇಯ ಉದ್ಬವವಾಗುತ್ತಿರಲಿಲ್ಲ. ಆದರೆ ಇವರು ತಮ್ಮ ಶ್ರೀಮಂತ ಸ್ನೇಹಿತರಿಗಾಗಿ ಲಕ್ಷಾಂತರ ಕೋಟಿ ರೂ. ಸಾಲವನ್ನು ಮನ್ನಾ ಮಾಡುತ್ತಿದ್ದಾರೆ ಮತ್ತು ಬಡವರ ಮೇಲೆ ತೆರಿಗೆ ಹೇರುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.