ಭೋಪಾಲ್: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳು ಶೀಘ್ರವೇ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಮಧ್ಯಪ್ರದೇಶ ಹೈಕೋರ್ಟ್ ಸೈಫ್ ಅಲಿ ಖಾನ್ ಅವರ ಪೂರ್ವಜರ ಆಸ್ತಿಗಳ ಮೇಲೆ ವಿಧಿಸಿದ್ದ ತಡೆಯಾಜ್ಞೆಯನ್ನು ತೆಗೆದುಹಾಕಿದೆ. ಇದು 1968ರ ಶತ್ರು ಆಸ್ತಿ ಕಾಯ್ದೆಯ ಅಡಿಯಲ್ಲಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. 1968ರ ಶತ್ರು ಆಸ್ತಿ ಕಾಯ್ದೆಯ ಪ್ರಕಾರ 1947ರಲ್ಲಿ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳ ಒಡೆತನದ ಆಸ್ತಿಗಳನ್ನು ಕೇಂದ್ರವು ವಶಕ್ಕೆ ಪಡೆಯಬಹುದಾಗಿದೆ.
ಡಿ. 13 ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ , 2017ರ ತಿದ್ದುಪಡಿ ಮಾಡಿದ ಶತ್ರು ಆಸ್ತಿ ಕಾಯ್ದೆ ಅಡಿ ಶಾಸನಬದ್ಧ ಪರಿಹಾರವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ದಿನಗಳ ಪ್ರಾತಿನಿಧ್ಯ ಸಲ್ಲಿಸಬೇಕೆಂದು ಪಟೌಡಿ ಕುಟುಂಬಕ್ಕೆ ಸೂಚಿಸಿತ್ತು. ಇಂದಿನಿಂದ ಈ ಆದೇಶಕ್ಕೆ ಸಂಬಂಧಿಸಿಂತೆ 30 ದಿನಗಳ ಒಳಗಡೆ ಮೇಲ್ಮನವಿ ಸಲ್ಲಿಸದೇ ಇದ್ದರೆ ಕೋರ್ಟ್ ಆದೇಶ ಪ್ರಕಟಿಸುವುದಿಲ್ಲ. ಒಂದು ವೇಳೆ ಸಲ್ಲಸದೇ ಇದ್ದರೆ ಕೋರ್ಟ್ ತನ್ನದೇ ಆದ ಆರ್ಹತೆಯ ಆಧಾರದ ಮೇಲೆ ಮೇಲ್ಮನವಿಯನ್ನು ಪರಿಗಣಿಸುತ್ತದೆ ಎಂದು ಹೇಳಿತ್ತು. ಇಲ್ಲಿಯವರೆಗೆ ಪಟೌಡಿ ಕುಟುಂಬಸ್ಥರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರಾ ಇಲ್ಲವೋ ತಿಳಿದು ಬಂದಿಲ್ಲ.
ಸೈಫ್ ಅಲಿ ಖಾನ್ ತಮ್ಮ ಬಾಲ್ಯವನ್ನು ಕಳೆದ ಫ್ಲ್ಯಾಗ್ ಸ್ಟಾಫ್ ಹೌಸ್, ನೂರ್-ಉಸ್-ಸಬಾ ಅರಮನೆ, ದಾರ್-ಉಸ್-ಸಲಾಮ್, ಹಬೀಬಿ ಬಂಗಲೆ, ಅಹ್ಮದಾಬಾದ್ ಅರಮನೆ, ಕೊಹೆಫಿಜಾ ಮತ್ತು ಇತರ ಪ್ರಮುಖ ಆಸ್ತಿಗಳು ಇದರಲ್ಲಿ ಸೇರಿವೆ.
ಶತ್ರು ಆಸ್ತಿ ಕಾಯ್ದೆಯ ಪ್ರಕಾರ, ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಬಂದ ವ್ಯಕ್ತಿಗಳ ಒಡೆತನದ ಆಸ್ತಿಗಳನ್ನು ಪಡೆಯಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಭೋಪಾಲ್ ನ ಕೊನೆಯ ನವಾಬ ಹಮೀದುಲ್ಲಾ ಖಾನ್ ಗೆ ಮೂವರು ಹೆಣ್ಣು ಮಕ್ಕಳಿದ್ದರು. ಅವರ ಮಕ್ಕಳಲ್ಲಿ ಹಿರಿಯಳಾದ ಅಬಿದಾ ಸುಲ್ತಾನ್ 1950ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದರು. ಎರಡನೇ ಮಗಳು ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಉಳಿದು, ನವಾಬ್ ಇಫ್ತಿಕರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರು ಮತ್ತು ಆಸ್ತಿಗೆ ಕಾನೂನುಬದ್ಧ ಉತ್ತರಾಧಿಕಾರಿಯಾದರು. ಸಾಜಿದಾ ಅವರ ಮೊಮ್ಮಗನಾದ ನಟ ಸೈಫ್ ಅಲಿ ಖಾನ್ ಆಸ್ತಿಯಲ್ಲಿ ಒಂದು ಪಾಲನ್ನು ಪಡೆದರು. ಆದರೂ, ಅಬಿದಾ ಸುಲ್ತಾನ್ ಅವರ ವಲಸೆಯಿಂದಾಗಿ ಸರ್ಕಾರವು ಆಸ್ತಿಗಳನ್ನು ಶತ್ರು ಆಸ್ತಿ ಎಂದು ಹೇಳಿಕೊಳ್ಳಲು ಕಾರಣವಾಯ್ತು. 2019ರಲ್ಲಿ ನ್ಯಾಯಾಲಯವು ಸಾಜಿದಾ ಸುಲ್ತಾನ್ ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಿತು, ಆದರೆ ಇತ್ತೀಚಿನ ಬೆಳವಣಿಗೆಯಿಂದ ಐತಿಹಾಸಿಕ ಆಸ್ತಿಗಳು ಸರಕಾರದ ಪಾಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭೋಪಾಲ್ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್ ಅವರು ಈ ವಿಷಯದ ಬಗ್ಗೆ ಹೈಕೋರ್ಟ್ ಆದೇಶ ಸ್ಪಷ್ಟವಾದ ನಂತರವೇ ಯಾವುದೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.