ಬೆಂಗಳೂರು: ಭಾರತ್ ಅಕ್ಕಿಯನ್ನು ಕೇಂದ್ರ ಸರ್ಕಾರ ಪ್ರಚಾರಕ್ಕೋಸ್ಕರ ನೀಡುತ್ತಿದೆ ಎಂದು ಆಹಾರ ಮತ್ತು ನಾಗರೀಕ ಸಚಿವ ಮುನಿಯಪ್ಪ ಕಿಡಿಕಾರಿದ್ದಾರೆ.
ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಬಿಜೆಪಿಯ ರವಿಕುಮಾರ್ ಅವರು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಅಂತ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಮುನಿಯಪ್ಪನವರು ಉತ್ತರಿಸಿ, ನಾವು ಅಕ್ಕಿ ಕೇಳಿದ್ದಾಗ ಕೇಂದ್ರ ಸರ್ಕಾರ ಕೊಡಲಿಲ್ಲ. ಈಗ ಭಾರತ್ ಅಕ್ಕಿ ಹೆಸರಿನಲ್ಲಿ 1 ಕೆಜಿಗೆ 29 ರೂ.ಗೆ ನಷ್ಟ ಮಾಡಿಕೊಂಡು ಅಕ್ಕಿ ಕೊಡ್ತಿದೆ. ಪ್ರಚಾರಕ್ಕಾಗಿ ಕೇಂದ್ರ ಅಕ್ಕಿ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಿ ಎಂದು ಕೇಳಿದಾಗ ನಮಗೆ ಅಕ್ಕಿ ಕೊಡಲಿಲ್ಲ. ನಾವು 34 ರೂಪಾಯಿಗೆ ಕೊಡ್ತೀವಿ ಅಂದರೂ ಕೊಡಲಿಲ್ಲ. ನಾವು ಬೇರೆ ರಾಜ್ಯದಿಂದ ಅಕ್ಕಿ ತರುವ ಪ್ರಯತ್ನ ಮಾಡಿದ್ರು ಆಗಲಿಲ್ಲ. ಹಾಗಾಗಿ ನಾವು 34 ರೂಪಾಯಿ ಹಣವನ್ನು ಫಲಾನುಭವಿಗಳಿಗೆ ನೀಡುತಿದ್ದೇವೆ. ಕೇಂದ್ರ ಸರ್ಕಾರ ಭಾರತ್ ರೈಸ್ ಅಂತ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ನಷ್ಟ ಮಾಡಿಕೊಂಡು ಅಕ್ಕಿ ಕೊಡುತ್ತಿದೆ ಎಂದು ದೂರಿದರು.