ನವದೆಹಲಿ: ಕೇಂದ್ರ ಸರ್ಕಾರದಲ್ಲಿನ ವಿವಿಧ ಹಿರಿಯ ಹುದ್ದೆಗಳಿಗೆ ‘ಲ್ಯಾಟರಲ್ ಎಂಟ್ರಿ’ ಗೆ ಸಂಬಂಧಿಸಿದಂತೆ ಇತ್ತೀಚಿನ ಜಾಹೀರಾತನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಮಂಗಳವಾರ ಕೇಂದ್ರ ಸಾರ್ವಜನಿಕ ಸೇವಾ ಆಯೋಗಕ್ಕೆ ಸೂಚಿಸಿದೆ.
ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಕೇಂದ್ರ ಲೋಕಸೇವಾ ಆಯೋಗದ (UPSC) ಅಧ್ಯಕ್ಷೆ ಪ್ರೀತಿ ಸುದನ್ ಅವರಿಗೆ ಪತ್ರ ಬರೆದು, ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಸೇವೆಗಳಲ್ಲಿ ತಮ್ಮ ಹಕ್ಕಿನ ಪ್ರಾತಿನಿಧ್ಯವನ್ನು ಪಡೆಯುವ ಹುದ್ದೆಗಳ ಜಾಹೀರಾತನ್ನು ರದ್ದುಗೊಳಿಸುವಂತೆ ಕೇಳಿಕೊಂಡರು.
ಕೇಂದ್ರ ಲೋಕಸೇವಾ ಆಯೋಗವು ಇತ್ತೀಚೆಗೆ ಜಾಹೀರಾತು ಪ್ರಕಟಿಸಿ ಕೇಂದ್ರ ಸರ್ಕಾರದ ವಿವಿಧ ಹಿರಿಯ ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿಗಾಗಿ ಪ್ರತಿಭಾವಂತ ಮತ್ತು ಸ್ಫೂರ್ತಿದಾಯಕ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಜಾಹೀರಾತು ಪ್ರಕಟಿಸಿತ್ತು. ಒಟ್ಟು 45 ಉನ್ನತ ಹುದ್ದೆಗಳಿಗೆ ನೇಮಕಾತಿಗಾಗಿ ಈ ಜಾಹೀರಾತು ನೀಡಲಾಗಿದ್ದು ಈ ಹುದ್ದೆಗಳಲ್ಲಿ ಕೇಂದ್ರದ 24 ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಹುದ್ದೆಗಳು ಸೇರಿವೆ.
ಈ ಜಾಹೀರಾತು, ಆಡಳಿತಾತ್ಮಕ ಮಟ್ಟದಲ್ಲಿ ಲ್ಯಾಟರಲ್ ಎಂಟ್ರಿ ಕುರಿತ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತಲ್ಲದೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಂದಲೂ ಟೀಕೆಗೆ ಗುರಿಯಾಗಿತ್ತು.