ನವದೆಹಲಿ: ಹೊಸ ಮಿಲಿಟರಿ ನೇಮಕಾತಿ ಯೋಜನೆಯ ವಿರುದ್ಧದ ಪ್ರತಿಭಟನೆಗಳು ಎಂಟು ರಾಜ್ಯಗಳಿಗೆ ಹರಡುತ್ತಿದ್ದಂತೆ, ಪ್ರತಿಭಟನೆಗೆ ಬೆದರಿದ ಕೇಂದ್ರ ಸರ್ಕಾರ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಹಾಗೂ ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ ‘ಅಗ್ನಿವೀರ’ರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ.
ಈ ಸಂಬಂಧ ಕೇಂದ್ರ ಗೃಹ ಇಲಾಖೆಯ ಟ್ವಿಟರ್ ಮಾಹಿತಿ ಹಂಚಿಕೊಳ್ಳಲಾಗಿದೆ.
ಅಲ್ಲದೆ, ಸಿಎಪಿಎಫ್ ಗಳು ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ ನೇಮಕಾತಿಗಾಗಿ ಅಗ್ನಿವೀರರಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಗೃಹ ವ್ಯವಹಾರಗಳ ಸಚಿವಾಲಯ ಘೋಷಿಸಿದೆ.
ಅಗ್ನಿವೀರ್ ಅವರ ಮೊದಲ ಬ್ಯಾಚ್ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ ಐದು ವರ್ಷಗಳ ವಯಸ್ಸಿನ ಸಡಿಲಿಕೆಯನ್ನು ಪಡೆಯುತ್ತದೆ ಎಂದು ಅದು ಹೇಳಿದೆ.
ಈ ಪಡೆಗಳಲ್ಲಿ ಅಗ್ನಿವೀರರ ನೇಮಕಾತಿಗೆ ಇದ್ದ ಅಧಿಕ ವಯೋಮಿತಿಯಲ್ಲಿ 3 ವರುಷಗಳ ರಿಯಾಯಿತಿ ತೋರುವುದಾಗಿಯೂ ಸಚಿವಾಲಯ ಟ್ವೀಟ್ ಮಾಡಿದೆ. ಅದೇ ವೇಳೆ ಮೊದಲ ಹಂತದ ಅಗ್ನಿವೀರ ನೇಮಕಾತಿಯಲ್ಲಿ ಹೆಚ್ಚಿನ ವಯೋಮಿತಿಯಲ್ಲಿ 5 ವರುಷಗಳ ರಿಯಾಯತಿ ತೋರುವುದಾಗಿಯೂ ಸಚಿವಾಲಯ ಶನಿವಾರ ಟ್ವೀಟ್ ಮಾಡಿದೆ.
ಅಗ್ನಿಪಥದ ವಿರುದ್ಧ ಎದ್ದಿರುವ ಸಿಟ್ಟನ್ನು ತಣಿಸಲು ಸಶಸ್ತ್ರ ಪಡೆಗೆ ಒಟ್ಟಾರೆ ನೇಮಕಾತಿಯ ವಯಸ್ಸನ್ನು 21ರಿಂದ 23ಕ್ಕೆ ಏರಿಸಲಾಗಿದೆ. ಕಳೆದ ಎರಡು ವರುಷಗಳಿಂದ ನೇಮಕಾತಿ ನಡೆದಿಲ್ಲ. ಮಂಗಳವಾರ ಘೋಷಿಸಿದಂತೆ ಹದಿನೇಳೂವರೆಯಿಂದ 21ರ ಪ್ರಾಯದವರನ್ನು ಮಾತ್ರ ಅಗ್ನಿವೀರರಾಗಿ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಲಾಗಿತ್ತು. ಅಗ್ನಿಪಥ ನೇಮಕಾತಿಯ ಅತ್ಯಧಿಕ ವಯಸ್ಸು 2022ರಲ್ಲಿ 23ಕ್ಕೆ ಏರಿಸಿದ್ದಾಗಿ ಗುರುವಾರ ರಕ್ಷಣಾ ಸಚಿವಾಲಯವು ತಿಳಿಸಿದೆ.
ಕಳೆದ ನಾಲ್ಕು ದಿನಗಳಿಂದ ಸಾವಿರಗಟ್ಟಲೆ ಜನ ಅದರಲ್ಲೂ ಯುವಕರು ಇದರ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ರೈಲು ಸುಟ್ಟಿದ್ದಾರೆ, ಟಯರ್ ಸುಟ್ಟು ಹೆದ್ದಾರಿ ತಡೆದಿದ್ದಾರೆ. ಪ್ರತಿಭಟನಕಾರರ ಮೇಲೆ ನೀರಿನ ಫಿರಂಗಿ, ಲಾಠಿ ಕೊನೆಗೆ ಗುಂಡೇಟು ಸಹ ಹಾರಿಸಲಾಗಿದೆ. ಆದರೂ ಪ್ರತಿಭಟನೆಯು ಮುಕ್ಕಾಲು ಭಾರತವನ್ನು ವ್ಯಾಪಿಸಿದೆ. ತೆಲಂಗಾಣದ ಸಿಕಂದರಾಬಾದಿನಲ್ಲಿ ಪ್ರತಿಭಟನಕಾರನೊಬ್ಬ ಪೋಲೀಸರ ಗುಂಡಿಗೆ ಬಲಿಯಾಗಿದ್ದಾನೆ.