►ಕೃಪೆ: ಬಾರ್ ಆ್ಯಂಡ್ ಬೆಂಚ್
ನ್ಯಾಯಮೂರ್ತಿಗಳ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಕೇಂದ್ರ ಸರ್ಕಾರ ಅನುಮೋದಿಸದೇ ಇರುವುದರಿಂದ ಅಭ್ಯರ್ಥಿಗಳು ಸಮ್ಮತಿ ಹಿಂಪಡೆಯಲು ಇಲ್ಲವೇ ಸಂಪೂರ್ಣ ಒಪ್ಪಿಗೆ ನೀಡದೆ ಇರುವುದಕ್ಕೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಬೇಸರ ವ್ಯಕ್ತಪಡಿಸಿದೆ. [ಬೆಂಗಳೂರು ವಕೀಲರ ಸಂಘ ಮತ್ತು ಬರುಣ್ ಮಿತ್ರ ಇನ್ನಿತರರ ನಡುವಣ ಪ್ರಕರಣ].
ಸರ್ಕಾರದ ಮೊದಲ ಸುತ್ತಿನ ಆಕ್ಷೇಪಣೆಯ ಬಳಿಕ ಮತ್ತೆ ಕೊಲಿಜಿಯಂ ಕಳುಹಿಸಿದ ಅಭ್ಯರ್ಥಿಗಳ ಹೆಸರುಗಳನ್ನು ಕೂಡ ಸರ್ಕಾರ ಮರಳಿಸುತ್ತಿದೆ ಎಂಬ ವಿಚಾರವನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರಿದ್ದ ಪೀಠ ತಿಳಿಸಿತು.
ಇಪ್ಪತ್ತೆರಡು ಹೆಸರುಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕಳುಹಿಸಿದೆ. ಕೆಲವು ಹೆಸರುಗಳನ್ನು ಪುನರುಚ್ಚರಿಸಿದ್ದರೂ ಅವುಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ. ಜೊತೆಗೆ ಕೊಲಿಜಿಯಂ ಸಮ್ಮತಿಸದ ಹೆಸರುಗಳಲ್ಲಿ ಕೆಲವನ್ನು ಮೂರನೇ ಬಾರಿಗೆ ಪುನರುಚ್ಚರಿಸಲಾಗಿದೆ. ಕೆಲವು ಹೆಸರುಗಳನ್ನು ಕೊಲಿಜಿಯಂ ಸ್ವತಃ ಅಂತಿಮಗೊಳಿಸದಿದ್ದರೂ ಅದನ್ನು ಪರಿಗಣಿಸಬೇಕು ಎಂದು ಕೇಂದ್ರ ಭಾವಿಸಿದಂತಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅನುಮೋದಿಸುವಲ್ಲಿ ಸರ್ಕಾರದ ಇಂತಹ ವಿಳಂಬದಿಂದ ಪ್ರತಿಭಾವಂತ ವಕೀಲರು ನ್ಯಾಯಾಧೀಶರಾಗಲು ತಮ್ಮ ಒಪ್ಪಿಗೆ ನೀಡದೆ ಹೋಗುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
“ಅಂತಿಮಗೊಳಿಸಿದ ಹೆಸರುಗಳನ್ನು ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ಬಳಿಕ ಆ ಹೆಸರುಗಳನ್ನು ಅಂತಿಮಗೊಳಿಸುವುದಿಲ್ಲ. ಇದು ಪರಿಣಾಮ ಬೀರುವಂಥದ್ದು” ಎಂಬುದಾಗಿ ನ್ಯಾ. ಓಕಾ ತಿಳಿಸಿದ್ದಾರೆ.
ಇದಕ್ಕೆ ದನಿಗೂಡಿಸಿದ ನ್ಯಾ. ಕೌಲ್ ಅವರು “ಅರ್ಹ ಅಭ್ಯರ್ಥಿಗಳು ಒಪ್ಪಿಗೆ ನೀಡಲು ಹಿಂಜರಿಯುವಂತಹ ವಾತಾವರಣವನ್ನು ನಾವು ನಿರ್ಮಿಸುತ್ತಿದ್ದೇವೆಯೇ ಎಂಬ ಕಳವಳ ನನ್ನದು” ಎಂದರು.
ತಾನು ಶಿಫಾರಸು ಒಪ್ಪದೆ ಮರಳಿಸಿದರೂ ಕೂಡ ಕೊಲಿಜಿಯಂ ಅದೇ ಶಿಫಾರಸನ್ನು ಪುನರುಚ್ಚರಿಸುತ್ತದೆ ಎಂಬ ಭಯದಿಂದ ಕೊಲಿಜಿಯಂ ಶಿಫಾರಸುಗಳ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಇರಬಾರದು ಎಂದು ಪೀಠ ಒತ್ತಿ ಹೇಳಿತು.
“ಕೇಂದ್ರ ಪುನರುಚ್ಚರಿಸಿದ ಹೆಸರುಗಳನ್ನು ಹಿಂದಕ್ಕೆ ಕಳುಹಿಸುವುದು ಕಳವಳಕಾರಿ ವಿಷಯ. ಸರ್ಕಾರಕ್ಕೆ ಕೆಲವು ಆತಂಕಗಳಿರಬಹುದು ಆದರೆ ನಾವು ಶಿಫಾರಸುಗಳನ್ನು ಪುನರುಚ್ಚರಿಸುತ್ತೇವೆ ಎಂಬ ಭಯದಲ್ಲಿ ಕಾರಣಗಳನ್ನೂ ನೀಡದೆ ಶಿಫಾರಸುಗಳನ್ನು ತಡೆ ಹಿಡಿಯುವಂತಿಲ್ಲ. ಒಮ್ಮೆ ನಾವು ಪುನರುಚ್ಚರಿಸಿದರೆ ಅದನ್ನು ಅಂತಿಮಗೊಳಿಸುವಲ್ಲಿ ಯಾವುದೇ ತೊಂದರೆ ಇರುತ್ತದೆ ಎಂದು ಅನ್ನಿಸುವುದಿಲ್ಲ” ಎಂಬುದಾಗಿ ನ್ಯಾಯಾಲಯ ಹೇಳಿತು.
ರಾಜಕೀಯ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ನ್ಯಾಯಮೂರ್ತಿಗಳು ಪ್ರಕರಣಗಳ ತೀರ್ಪು ನೀಡುತ್ತಾರೆ ಎಂದ ಪೀಠ ಈ ನಿಟ್ಟಿನಲ್ಲಿ ನ್ಯಾ. ವಿ ಆರ್ ಕೃಷ್ಣಯ್ಯರ್ ಅವರ ನ್ಯಾಯನಿಷ್ಠುರತೆಯ ವಿಚಾರವನ್ನು ಪ್ರಸ್ತಾಪಿಸಿತು. ಜಸ್ಟಿಸ್ ಕೃಷ್ಣ ಅಯ್ಯರ್ ಅವರು ಕೇರಳ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ವಕೀಲರಾಗಿದ್ದಾಗ ರಾಜ್ಯದಲ್ಲಿ ಎಡ ಆಡಳಿತಕ್ಕೆ ಸೇರಿದ್ದರು.
ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು ಮಾಡಿದ್ದ ಹೆಸರುಗಳನ್ನು ಅನುಮೋದಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದು ಎರಡನೇ ನ್ಯಾಯಮೂರ್ತಿಗಳ ಪ್ರಕರಣದಲ್ಲಿ ನೀಡಲಾದ ತೀರ್ಪಿಗೆ ವಿರುದ್ಧ ಎಂದು ದೂರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕಳೆದ ಒಂದೂವರೆ ವರ್ಷಗಳಿಂದ ಬಾಕಿ ಉಳಿದಿರುವ ಶಿಫಾರಸುಗಳಿಗೆ ಸಮ್ಮತಿ ನೀಡುವಂತೆ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಕೊಲಿಜಿಯಂ ವ್ಯವಸ್ಥೆ ವಿರುದ್ಧವಾಗಿ ಕೆಲ ನ್ಯಾಯಮೂರ್ತಿಗಳು ನೀಡಿದ್ದ ಅಭಿಪ್ರಾಯವನ್ನೇ ಮುಂದುಮಾಡಿ ತಾನು ಕೊಲಿಜಿಯಂ ಶಿಫಾರಸುಗಳನ್ನು ವಿಳಂಬಗೊಳಿಸಲು ಇದೇ ಕಾರಣ ಎಂದು ಕೇಂದ್ರ ಸರ್ಕಾರ ಸಬೂಬು ಹೇಳುವಂತಿಲ್ಲ ಎಂದು ಗುಡುಗಿತ್ತು.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಕಾನೂನನ್ನು ರಾಷ್ಟ್ರೀಯ ಕೊಲಿಜಿಯಂ ವ್ಯವಸ್ಥೆ ಎತ್ತಿಹಿಡಿದ 2015ರ ಸಾಂವಿಧಾನಿಕ ಪೀಠದ ತೀರ್ಪು (ಎನ್‌ಜೆಎಸಿ ಪ್ರಕರಣ) ಈಗಾಗಲೇ ಇತ್ಯರ್ಥಪಡಿಸಿದೆ ಎಂದು ಸ್ಪಷ್ಟಪಡಿಸಿತ್ತು.
ಶುಕ್ರವಾರದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, 104 ಶಿಫಾರಸುಗಳಲ್ಲಿ 44ನ್ನು 3 ದಿನಗಳಲ್ಲಿ ಅಂತಿಮಗೊಳಿಸಿ ಕಳಿಸಿಕೊಡಲಾಗುವುದು… ವಾರಾಂತ್ಯದ ಹೊತ್ತಿಗೆ ಎಲ್ಲಾ ಹೆಸರುಗಳನ್ನು ಅಂತಿಮಗೊಳಿಸಲಾಗುವುದು. ಗಡುವಿಗೆ ಬದ್ಧರಾಗಿರುತ್ತೇವೆ ಎಂದರು.
ಜೊತೆಗೆ ರಾಜಸ್ಥಾನ ಹೈಕೋರ್ಟ್‌ಗೆ ಮಾಡಲಾದ ಶಿಫಾರಸುಗಳ ಬಗ್ಗೆ ಹೆಚ್ಚು ವಿಳಂಬಗೊಳಿಸದೆ ಕೇಂದ್ರದಿಂದ ಸೂಚನೆಗಳನ್ನು ಪಡೆಯುವುದಾಗಿಯೂ ಹೀಗಾಗಿ ವಿಚಾರಣೆ ಮುಂದೂಡುವಂತೆಯೂ ಎ ಜಿ ಕೋರಿದರು. ಕೊನೆಗೆ ನ್ಯಾಯಾಲಯ ಫೆ. 3ಕ್ಕೆ ಪ್ರಕರಣವನ್ನು ಮುಂದೂಡಿತು.
“ದಯವಿಟ್ಟು ಜಾರಿಗೊಳಿಸಿದ ವಾರೆಂಟ್‌ಗಳೊಂದಿಗೆ ಬನ್ನಿ. ಬರೀ ನಗುತ್ತಾ ಇರದಿರಿ” ಎಂದು ಎಜಿ ಅವರಿಗೆ ನ್ಯಾಯಾಲಯ ಖಾರವಾಗಿ ಪ್ರತಿಕ್ರಿಯಿಸಿತು.