ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚು ಲಸಿಕೆಯನ್ನು ಪೂರೈಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರಧಾನಿ ಅವರಿಗೆ ಪತ್ರ ಬರೆದ ಅವರು, ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಅಗತ್ಯಕ್ಕೆ ಅನುಗುಣವಾಗಿ ಲಸಿಕೆಯನ್ನು ಪೂರೈಸುತ್ತಿಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಅಗತ್ಯಕ್ಕೆ ಬೇಕಾದಷ್ಟು ಲಸಿಕೆಯನ್ನು ಪೂರೈಸುತ್ತಿಲ್ಲ. ಅತಿ ಹೆಚ್ಚಿನ ಜನಸಂಖ್ಯೆ ಹಾಗೂ ಹೆಚ್ಚಿನ ನಗರ ಪ್ರದೇಶಗಳನ್ನು ಹೊಂದಿರುವ ರಾಜ್ಯವಾದರೂ ಕೇಂದ್ರ ರಾಜ್ಯಕ್ಕೆ ಲಸಿಕೆಯನ್ನು ಅಗತ್ಯಕ್ಕೆ ಅನುಸಾರವಾಗಿ ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲಸಿಕೆಯ ವಿಚಾರದಲ್ಲಿಯೂ ರಾಜಕೀಯದ ಧೋರಣೆಯನ್ನು ಅನುಸರಿಸುತ್ತಿದೆ. ಬಂಗಾಳವನ್ನು ಕಡೆಗಣಿಸಿ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಲಸಿಕೆಯನ್ನು ಹೆಚ್ಚು ಒದಗಿಸಲಾಗುತ್ತಿದೆ ಎಂದು ಮಮತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೋಲ್ಕತ್ತಾ ಹೈ ಕೋರ್ಟ್ ರಾಜ್ಯದಲ್ಲಿ ಈವರೆಗೆ ನೀಡಲಾದ ಲಸಿಕೆಯ ಪ್ರಮಾಣ ಎಷ್ಟು ಹಾಗೂ ಕೇಂದ್ರದಿಂದ ರಾಜ್ಯಕ್ಕೆ ಪೂರೈಸಲಾದ ಲಸಿಕೆಯ ಪ್ರಮಾಣಗಳ ವಿವರವನ್ನು ಕೇಳಿತ್ತು. ಮಾತ್ರವಲ್ಲದೇ, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಿಗೆ ಪೂರೈಸಲಾದ ಒಟ್ಟು ಲಸಿಕೆಗಳ ವಿವರವನ್ನು ನೀಡುವಂತೆ ಕೇಂದ್ರಕ್ಕೆ ಆದೇಶಿಸಿತ್ತು.