October 27, 2020
ತಮಿಳುನಾಡು: ತಂದೆ-ಮಗನಿಗೆ 7 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದ ಪೊಲೀಸರು: ಕಸ್ಟಡಿ ಸಾವಿನ ಕುರಿತು ಸಿಬಿಐ ಚಾರ್ಜ್ ಶೀಟ್

ತಮಿಳುನಾಡಿನಲ್ಲಿ ಜೂನ್ ತಿಂಗಳಲ್ಲಿ ಸಂಭವಿಸಿದ ತಂದೆ ಮತ್ತು ಮಗನ ಕಸ್ಟಡಿ ಸಾವಿನ ಕುರಿತು ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಅವರಿಗೆ 7 ಗಂಟೆಗೂ ಅಧಿಕ ಕಾಲ ಚಿತ್ರಹಿಂಸೆ ನೀಡಲಾಗಿತ್ತೆಂದು ಉಲ್ಲೇಖಿಸಲಾಗಿದೆ ಎಂದು ಎನ್.ಡಿ.ಟಿ.ವಿ ಮಂಗಳವಾರ ವರದಿ ಮಾಡಿದೆ.
ಜಯರಾಜ್ ಮತ್ತು ಅವರ ಮಗ ಬೆನಿಕ್ಸ್ ರನ್ನು ಹೇಗೆ ಹಿಂಸಿಸಲಾಗಿತ್ತೆಂದರೆ, ಅವರ ರಕ್ತವು ಠಾಣೆಯ ಗೋಡೆಯ ಮೇಲೆ ಹರಡಿತ್ತು. ಅದನ್ನು ನಂತರ ಅವರ ಬಟ್ಟೆಯಿಂದ ಸ್ವಚ್ಛಗೊಳಿಸಲಾಗಿತ್ತು. ಸಂಜೆ 7:45ರಿಂದ ರಾತ್ರಿ 3 ಗಂಟೆಯ ತನಕ ಅವರಿಗೆ ಕ್ರೂರ ಚಿತ್ರಹಿಂಸೆ ನೀಡಲಾಗಿತ್ತು ಎಂದು ಚಾರ್ಜ್ ಶೀಟ್ ಹೇಳಿದೆ.
ಇಂಡಿಯಾ ಟುಡೆ ವರದಿಯ ಪ್ರಕಾರ “ಪ್ರಯೋಗಶಾಲೆ ವಿಶ್ಲೇಷಣೆಯ ಫಲಿತಾಂಶಗಳು” ಎಂಬ ಹೆಸರಿನ ವರದಿಯನ್ನು ಸಿಬಿಐ ಮದ್ರಾಸ್ ಹೈಕೋರ್ಟ್ ಗೆ ಸಲ್ಲಿಸಿದೆ. ಸಂತಾನಕುಲಮ್ ಪೊಲೀಸ್ ಠಾಣೆಯಿಂದ ಸಂಗ್ರಹಿಸಲಾದ ಡಿ.ಎನ್.ಎ ಮಾದರಿಗಳು ತಂದೆ ಮತ್ತು ಮಗನ ಡಿ.ಎನ್.ಎಯೊಂದಿಗೆ ಹೋಲಿಕೆಯಾಗುತ್ತಿದೆ ಎಂದು ವರದಿ ಹೇಳಿದೆ.
ಅವರಿಗೆ ಲಾಠಿಯಿಂದ ಥಳಿಸಲಾಗಿತ್ತು. ಪೊಲೀಸರು ಅವರ ರಕ್ತಸಿಕ್ತ ಉಡುಪುಗಳನ್ನುಎಸೆದಿದ್ದರು ಮತ್ತು ಇತರ ಪುರಾವೆಗಳನ್ನು ನಾಶಪಡಿಸಿದ್ದರು ಎಂದು ಸಿಬಿಐ ತಿಳಿಸಿದೆ.